ಮುಂಬೈ: ಆಗಸ್ಟ್ ನಲ್ಲಿ ಆರಂಭವಾಗಲಿರುವ ಮಹತ್ವದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮತ್ತಿಬ್ಬರು ಆರಂಭಿಕ ಆಟಗಾರರನ್ನು ಕಳುಹಿಸಲಾಗುತ್ತದೆ ಎನ್ನಲಾಗಿದೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದ ಕಾರಣ ಇಬ್ಬರು ಆರಂಭಿಕ ಆಟಗಾರರನ್ನು ಕಳುಹಿಸಿಕೊಡಬೇಕು ಎಂದು ಟೀಂ ಮ್ಯಾನೇಜ್ ಮೆಂಟ್ ಬಿಸಿಸಿಐ ಗೆ ಕೇಳಿಕೊಂಡಿದೆ.
ಇಂಗ್ಲೆಂಡ್ ನಲ್ಲಿರುವ ಟೀಂ ಮ್ಯಾನೇಜ್ ಮೆಂಟ್ ಈ ಬಗ್ಗೆ ಜೂ.28ರಂದು ಬಿಸಿಸಿಐ ಗೆ ಇ ಮೇಲ್ ಮಾಡಿದೆ. ಯುವ ಆಟಗಾರರಾದ ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್ ರನ್ನು ಇಂಗ್ಲೆಂಡ್ ಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಬ್ಯಾಕಪ್ ಓಪನರ್ ಆಗಿರುವ ಅಭಿಮನ್ಯು ಈಶ್ವರನ್ ಇನ್ನೂ ಉನ್ನತ ಮಟ್ಟದ ಕ್ರಿಕೆಟ್ ಗೆ ಪಕ್ಷವಾಗಿಲ್ಲ. ಹಾಗಾಗಿ ಅವರ ಬದಲಿಗೆ ಶಾ ಮತ್ತು ಪಡಿಕ್ಕಲ್ ರನ್ನು ಇಂಗ್ಲೆಂಡ್ ಗೆ ಕಳುಹಿಸಿ ಎಂದು ತಂಡ ಕೇಳಿದೆ. ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ : ಮೇರಿ, ಮನ್‌ಪ್ರೀತ್‌ಗೆ ಧ್ವಜ ಗೌರವ
ತಂಡದಲ್ಲಿ ಈಗಾಗಲೇ ಕೆಎಲ್ ರಾಹುಲ್ ಇದ್ದು, ಈ ಬೆಳವಣಿಗೆಗಳನ್ನು ಗಮನಿಸಿದಾಗ ಅವರನ್ನು ಆರಂಭಿಕರನ್ನಾಗಿ ಆಡಿಸುವ ಯೋಚನೆಯಲ್ಲಿ ತಂಡ ಇದ್ದಂತಿಲ್ಲ. ಅವರು ಮಧ್ಯಮ ಕ್ರಮಾಂಕದಲ್ಲೇ ಆಡಬೇಕಾಗಬಹುದು. ಅಂದಹಾಗೆ ಕೆ ಎಲ್ ಈ ಹಿಂದೆ ಇಂಗ್ಲೆಂಡ್ ನಲ್ಲಿ ಇನ್ನಿಂಗ್ಸ್ ಆರಂಭಿಸಿದ ಅನುಭವ ಹೊಂದಿದ್ದಾರೆ.
ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್ ಇಬ್ಬರೂ ಸದ್ಯ ಶ್ರೀಲಂಕಾ ಸರಣಿಯಲ್ಲಿದ್ದಾರೆ. ಆ ಸರಣಿ ಜು.26ಕ್ಕೆ ಅಂತ್ಯವಾಗಲಿದೆ. ಇಂಗ್ಲೆಂಡ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ.