ಮೊಹಾಲಿ: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವನ್ನು ಭಾರತ 7 ವಿಕೆಟುಗಳಿಂದ ಗೆದ್ದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ 72 ರನ್ನುಗಳ ನೆರವಿನಿಂದ ಭಾರತ ಇನ್ನೂ 06 ಎಸೆತಗಳು ಬಾಕಿ ಇರುತ್ತಾ ಗೆಲುವಿನ ನಗು ಬೀರಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯ ಕಾರಣ ರದ್ದಾಗಿತ್ತು.
ಹರಿಣಗಳು ನೀಡಿದ 149 ರನ್ನುಗಳ ಗುರಿಯನ್ನು ಬೆನ್ನತ್ತಿದ ಭಾರತ ಶಿಖರ್ ಧವನ್ (40) ಮತ್ತು ನಾಯಕ ವಿರಾಟ್ ಕೊಹ್ಲಿ (72) ಆಸರೆಯಾದರು. ರೋಹಿತ್ ಶರ್ಮಾ 12 ರನ್ ಗಳಿಸಿ ಔಟಾದ ಬಳಿಕ ಜೊತೆಯಾದ ಧವನ್ – ಕೊಹ್ಲಿ ಜೋಡಿ ಎರಡನೇ ವಿಕೆಟಿಗೆ 61 ರನ್ನುಗಳ ಜೊತೆಯಾಟ ಕಟ್ಟಿದರು. ಧವನ್ ಔಟಾದ ಬಳಿಕ ಆಡಳಿಲಿದ ರಿಷಭ್ ಪಂತ್ (4) ಸಿಡಿಯಲು ವಿಫಲರಾದರು. ಬಳಿಕ ನಾಯಕ ಕೊಹ್ಲಿಗೆ ಜೊತೆಯಾದ ಶ್ರೇಯಸ್ ಐಯರ್ (16 ನಾಟೌಟ್) ಉತ್ತಮ ಜೊತೆಯಾಟ ಆಡುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ವಿರಾಟ್ ಕೊಹ್ಲಿ ಅವರ ಇಂದಿನ ಭರ್ಜರಿ ಇನ್ನಿಂಗ್ಸ್ ನಲ್ಲಿ 04 ಬೌಂಡರಿ ಹಾಗೂ 03 ಭರ್ಜರಿ ಸಿಕ್ಸರ್ ಇತ್ತು. ಕೊಹ್ಲಿ 52 ಎಸೆತಗಳಿಂದ 72 ರನ್ ಬಾರಿಸಿ ಔಟಾಗದೇ ಉಳಿದರು.
ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪ್ರವಾಸಿಗರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ನಾಯಕ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ (52) ಮತ್ತು ಚೊಚ್ಚಲ ಪಂದ್ಯವನ್ನಾಡುತ್ತಿರುವ ಟಿ ಬವುಮಾ ಅವರ 49 ರನ್ನುಗಳ ನೆರವಿನಿಂದ ದಕ್ಷಿಣ ಅಫ್ರಿಕಾ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 149 ರನ್ನುಗಳನ್ನು ಕಲೆ ಹಾಕಿತು.
ಭಾರತದ ಪರ ಚಹಾರ್ 2 ವಿಕೆಟ್ ಪಡೆದರೆ, ಸೈನಿ, ಜಡೇಜಾ ಮತ್ತು ಪಾಂಡ್ಯಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇಂದಿನ ಈ ಟಿ20 ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ತಂಡದಲ್ಲಿ ಮೂವರು ಆಟಗಾರರು ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದರು. 29 ವರ್ಷ ಪ್ರಾಯದ ಟೆಂಬಾ ಬವುಮಾ, 21 ವರ್ಷ ಪ್ರಾಯದ ಜೋರ್ನ್ ಫಾರ್ಚೂನ್ ಮತ್ತು 25 ವರ್ಷದ ಬೌಲರ್ ಆ್ಯನ್ರಿಚ್ ನೋರ್ಜೆ.