ಕೊಲಂಬೊ: ಏಕಪಕ್ಷೀಯವಾಗಿ ನಡೆದ ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದೆ. ಆರು ವಿಕೆಟ್ ಕಿತ್ತು ಶ್ರೀಲಂಕಾ ತಂಡದ ನಡುಮುರಿದ ಮೊಹಮದ್ ಸಿರಾಜ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರೇಮದಾಸ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಲಂಕಾ ಕೇವಲ 15.2 ಓವರ್ ಗಳಲ್ಲಿ 50 ರನ್ ಗೆ ಆಲೌಟಾಯಿತು. ಭಾರತ ತಂಡವು ಗುರಿ ತಲುಪಿ 8ನೇ ಬಾರಿಗೆ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು.
ಟಾಸ್ ಗೆದ್ದು ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆಯ್ದ ಶ್ರೀಲಂಕಾ ಮೊದಲ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ತನ್ನ ಎರಡನೇ ಓವರ್ ನಲ್ಲಿ ಪಂದ್ಯದ ದಿಕ್ಕು ಬದಲಿಸಿದ ಸಿರಾಜ್ ಆರು ಎಸೆತಗಳ ಅಂತರದಲ್ಲಿ ನಾಲ್ಕು ವಿಕೆಟ್ ಕಿತ್ತರು. ಈ ಮೂಲಕ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆಗಿ ಮೂಡಿಬಂದರು.
ಲಂಕಾ ಪರ 17 ರನ್ ಗಳಿಸಿದ ಕುಸಾಲ್ ಮೆಂಡಿಸ್ ಅವರದ್ದೇ ಹೆಚ್ಚಿನ ಗಳಿಕೆ. ಮೆಂಡಿಸ್ ಹೊರತು ಪಡಿಸಿ ಎರಡಂಕಿ ಮೊತ್ತ ದಾಟಿದ್ದು ದುಶಾನ್ ಹೇಮಂತ ಮಾತ್ರ (13 ರನ್). ಬಿಗು ದಾಳಿ ಸಂಘಟಿಸಿದ ಸಿರಾಜ್ 21 ರನ್ ನೀಡಿ ಆರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಅವರು ಮೂರು ರನ್ ನೀಡಿ ಕೊನೆಯ ಮೂರು ವಿಕೆಟ್ ಕಿತ್ತರು. ಬುಮ್ರಾ ಅವರು ಒಂದು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನತ್ತಿದ ಭಾರತ ತಂಡದ ಪರ ಗಿಲ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರ ಆಕರ್ಷಕ ಬ್ಯಾಟಿಂಗ್ ನಿಂದ ತಂಡವು ವಿಕೆಟ್ ಕಳೆದುಕೊಳ್ಳದೆ ಕೇವಲ ಓವರ್ ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ಗಿಲ್ ಅಜೇಯ 27 ಮತ್ತು ಇಶಾನ್ ಕಿಶನ್ 23 ರನ್ ಮಾಡಿದರು. ಭಾರತ ತಂಡ ಹತ್ತು ವಿಕೆಟ್ ಗಳ ಅಂತರ ಗೆಲುವು ಕಂಡಿತು.