ಆಸ್ಟ್ರೇಲಿಯಾದ ಬಾಯಿ ಮುಚ್ಚಿಸಲು ಇರುವ ಏಕೈಕ ಮಾರ್ಗ ಎಂದರೆ, ಅದನ್ನು ಸೋಲಿಸುವುದು ಎಂದು ನಾನು ಕಳೆದ ವಾರವೇ ಹೇಳಿದ್ದೆ. ಭಾರತೀಯ ಕ್ರಿಕೆಟ್ ತಂಡ ಈ ಕೆಲಸವನ್ನು ಅದ್ಭುತವಾಗಿ ಮಾಡಿದೆ. ಪರಿಸ್ಥಿತಿಗಳೆಲ್ಲ ತನ್ನ ವಿರುದ್ಧವಿದ್ದಾಗಲೂ ಗಟ್ಟಿಯಾಗಿ ನಿಂತು ಸರಣಿ ಗೆಲ್ಲುವುದು ಅಸಾಧಾರಣ ಪ್ರದರ್ಶನವೇ ಸರಿ.
ಗೆಲುವಿನ ಶ್ರೇಯಸ್ಸು ಕೋಚ್ ರವಿ ಶಾಸಿŒ ಮತ್ತು ನಾಯಕ ಅಜಿಂಕ್ಯ ರಹಾನೆಗೆ ಸಲ್ಲಲೇಬೇಕಿದೆ. ಒಟ್ಟಲ್ಲಿ ಭಾರತೀಯ ತಂಡದ ಮನೋಧೋರಣೆಯಂತೂ ನಂಬಲಸಾಧ್ಯವಾಗಿತ್ತು. ಸುದೈವವಶಾತ್ ತಂಡಕ್ಕೆ ರಿಷಭ್ ಪಂತ್ ಎಂಬ ಮಾಣಿಕ್ಯವೂ ಸಿಕ್ಕಿದೆ.
ಸತ್ಯವೇನೆಂದರೆ ಪಂತ್ ಒಬ್ಬ ಅಸ್ಥಿರ ಆಟಗಾರ. ಕೆಲವು ಸಮಯದಿಂದಲೂ ಅವನು ಹಾಗೆಯೇ ಆಡುತ್ತಾ ಬಂದಿದ್ದಾನೆ. ನನಗಿನ್ನೂ ನೆನಪಿದೆ- ಐಪಿಎಲ್ ಸಮಯದಲ್ಲಿ ನಾನು “ಪಂತ್ ಪದೇ ಪದೆ ಒಂದೇ ರೀತಿಯಲ್ಲಿಯೇ ಔಟ್ ಆಗುತ್ತಾನೆ’ ಎಂದು ಟೀಕಿಸಿದ್ದೆ. ಆದರೆ ಆತ ಪ್ರತಿಭಾವಂತ. ತನಗಿಷ್ಟವಾದ ಕಡೆಯಲ್ಲೇ ಚೆಂಡನ್ನು ಬಾರಿಸುವ ಸಾಮರ್ಥ್ಯವಿದ್ದರೂ ಅಗತ್ಯವಿದ್ದ ಸಮಯದಲ್ಲಿ ಆತ ವಿಫಲನಾಗುತ್ತಿದ್ದ. ಈಗ ಪಂತ್ ಭಾರತಕ್ಕಾಗಿ ಹಾಗೂ ಖುದ್ದು ತನಗಾಗಿ ಮಾಡಿರುವ ಈ ಸಾಧನೆಯು ಆತನನ್ನು ಹುಡುಗನಿಂದ ಪ್ರಬುದ್ಧನಾಗಿ ಬದಲಿಸಲಿ ಎಂದು ಆಶಿಸುತ್ತೇನೆ.
ಪಂತ್ ಮತ್ತು ಭಾರತ ತಂಡದಲ್ಲಿನ ಇತರ ಅನನುಭವಿ ಆಟಗಾರರ ಪ್ರದರ್ಶನದ ಶ್ರೇಯಸ್ಸು ಐಪಿಎಲ್‌ಗೂ ಸಲ್ಲಬೇಕು. ಪ್ರಪಂಚದಲ್ಲೇ ಕ್ರಿಕೆಟ್‌ಗೆ ಅತ್ಯುತ್ತಮ ಅಕಾಡೆಮಿ ಎಂಬುದಿದ್ದರೆ, ಅದು ಐಪಿಎಲ್. ಐಪಿಎಲ್ ತಂಡಗಳಲ್ಲಿ ಆಸ್ಟ್ರೇಲಿಯನ್ನರು ಸೇರಿದಂತೆ ಅನೇಕ ವಿದೇಶಿ ಆಟಗಾರರೂ ಇರುತ್ತಾರೆ. ಹೀಗಾಗಿ ಇಂಥ ಸ್ಟಾರ್ಸ್‌ಗಳ ವಿರುದ್ಧ ಆಟವಾಡಿದ, ನೆಟ್ಸ್‌ನಲ್ಲಿ ಹಾಗೂ ಪಂದ್ಯದ ವೇಳೆ ಈ ಆಸ್ಟ್ರೇಲಿಯನ್ ವೇಗಿಗಳ ಚೆಂಡುಗಳನ್ನು ಬೌಂಡರಿಗಟ್ಟಿದ ಅನುಭವವೂ ಈ ಯುವ ಪಟುಗಳಿಗಿದೆ. ಹೀಗಾಗಿ ಅವರಲ್ಲಿ ಅಂತಾರಾಷ್ಟ್ರೀಯ ಸೂಪರ್‌ಸ್ಟಾರ್‌ಗಳ ಬಗ್ಗೆ ಭಯವೆನ್ನುವುದೇ ಉಳಿದಿಲ್ಲ! ಲಲಿತ್ ಮೋದಿ ಮತ್ತು ಬಿಸಿಸಿಐ ಬಿತ್ತಿದ ಈ ಅದ್ಭುತ ಯೋಜನೆಯ ಫಲಗಳು ಈಗ ಕಾಣಿಸಿಕೊಳ್ಳುತ್ತಿವೆ.
ಇನ್ನೊಂದೆಡೆ ಆಸ್ಟ್ರೇಲಿಯನ್ನರ ವಿಚಾರಕ್ಕೆ ಬರುವುದಾದರೆ ಅವರಿಗೆ ಸೋಲನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಈ ಸೋಲಿನ ಅನಂತರ ಆ ತಂಡದಲ್ಲಿ ಕೆಲವರ ಕೆಲಸಕ್ಕೆ ಕತ್ತರಿ ಬೀಳುವ ಸಾಧ್ಯತೆಯೂ ಇದೆ. ಆಸ್ಟ್ರೇಲಿಯನ್ ನಾಯಕ ಟಿಮ್ ಪೇನ್, ಮೂರನೇ ಟೆಸ್ಟ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್‌ನನ್ನು ಕೆಣಕುತ್ತಾ, “”ನೀನು ಗಬ್ಟಾಕೆ ಬರುವುದನ್ನು ಕಾಯುತ್ತಿದ್ದೇವೆ ಅಶ್ವಿನ್” ಎಂದಿದ್ದ. ಈಗ ಗಬ್ಟಾದಲ್ಲೇ ಭಾರತ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದೆ. ಈಗ ಆಸ್ಟ್ರೇಲಿಯಾ ತಂಡ ಎಲ್ಲಿಗೆ ಹೋಗುತ್ತದೋ!
ಕೆವಿನ್ ಪೀಟರ್‌ಸನ್, ಮಾಜಿ ಕ್ರಿಕೆಟಿಗ