Advertisement
ಅಫ್ಘಾನಿಸ್ಥಾನ ಕೆಳ ರ್‍ಯಾಂಕಿಂಗ್ ತಂಡವಾಗಿರ ಬಹುದು, ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿರಬಹುದು, ಆದರೆ ಅದು ಈ ಕೂಟದ ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಮರೆಯಬಾರದು. ಇದಕ್ಕೆ ಕಳೆದ ವಿಶ್ವಕಪ್ ಪಂದ್ಯವೇ ಸಾಕ್ಷಿ. ಸೌತಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಂದಿನ ಗುಲ್ಬದಿನ್ ನೈಬ್ ಪಡೆ ಭಾರತವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಆದರೆ ಕೊಹ್ಲಿ ಬಳಗದ ನಸೀಬು ಚೆನ್ನಾಗಿತ್ತು. ಅದು ದೊಡ್ಡ ಅವಮಾನದಿಂದ ಪಾರಾಯಿತು. ಭಾರತವನ್ನು 8ಕ್ಕೆ 224 ರನ್ನಿಗೆ ಹಿಡಿದು ನಿಲ್ಲಿಸಿದಾಗ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಆದರೆ ನಮ್ಮ ಬೌಲರ್ ತಿರುಗೇಟು ನೀಡಲು ಯಶಸ್ವಿಯಾದರು. ಗೆಲುವಿನಿಂದ ಅಫ್ಘಾನ್ ಕೇವಲ 11 ರನ್ನುಗಳಿಂದ ಹಿಂದುಳಿಯಿತು.
ಮತ್ತೆ ಭಾರತ ಇಂಥ ದೊಂದು ಸ್ಥಿತಿಯನ್ನು ಆಹ್ವಾನಿಸಿ ಕೊಳ್ಳಬಾರದು. ಇದಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸುಧಾರಣೆ ಕಾಣುವುದು ಮುಖ್ಯ. ಆಸ್ಟ್ರೇಲಿಯ ವಿರುದ್ಧ 200 ರನ್ ಚೇಸಿಂಗ್ ವೇಳೆ 2 ರನ್ ಆಗುವಷ್ಟರಲ್ಲಿ ರೋಹಿತ್ ಶರ್ಮ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಾಗ ಭಾರತದ ಗೆಲುವಿನ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಅನೇಕರ ಟಿವಿಗಳು ಆಫ್ ಆಗಿದ್ದವು. ಇಂಥ ಸ್ಥಿತಿಯಲ್ಲಿ ವಿರಾಟ್ ಕೊಹ್ಲಿ-ಕೆ.ಎಲ್. ರಾಹುಲ್ ಸೇರಿಕೊಂಡು ಭಾರತದ ಸರದಿಯನ್ನು ಆಧರಿಸಿ ನಿಂತ ರೀತಿ ಅಸಾಮಾನ್ಯ. ನಿಂತು ಆಡಿ ಇನ್ನಿಂಗ್ಸ್ ಕಟ್ಟಿದರೆ ತಂಡವನ್ನು ಎಷ್ಟೇ ಕಠಿನ ಸನ್ನಿವೇಶದಿಂದಲೂ ಪಾರುಮಾಡಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಅಫ್ಘಾನ್ ವಿರುದ್ಧದ ಪಂದ್ಯದಿಂದಲೂ ಇನ್‌ಫಾರ್ಮ್ ಆರಂಭಕಾರ ಶುಭಮನ್ ಗಿಲ್ ಹೊರಗುಳಿಯಲಿದ್ದಾರೆ. ಮತ್ತೆ ರೋಹಿತ್ ಜತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ವಿಶ್ವಕಪ್‌ನಂಥ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಲು ಲಭಿಸಿದ ಅವಕಾಶವನ್ನು ಇಶಾನ್‌ನಂಥ ಯುವ ಆಟಗಾರರು ಸರಿಯಾಗಿ ಬಳಸಿಕೊಳ್ಳಬೇಕಿದೆ. ಹಾಗೆಯೇ ಶ್ರೇಯಸ್ ಅಯ್ಯರ್. ಆಗಲೇ ಬೆನ್ನು ಬೆನ್ನಿಗೆ 2 ವಿಕೆಟ್ ಬಿದ್ದಾಗ ಹೆಚ್ಚು ಜವಾಬ್ದಾರಿಯುತವಾಗಿ, ಅಷ್ಟೇ ಜಾಗರೂಕವಾಗಿ ಆಡುವುದನ್ನು ಬಿಟ್ಟು ಕೇರ್‌ಲೆಸ್ ಆಗಿ ಆಡಿ ವಿಕೆಟ್ ಕಳೆದುಕೊಂಡಿದ್ದರು. ಇಂಥ ಅವಸರ ಸಲ್ಲದು.
Related Articles
Advertisement
ಅಫ್ಘಾನ್ ಅಪಾಯಕಾರಿಅಫ್ಘಾನಿಸ್ಥಾನಕ್ಕೆ ಕಳೆದುಕೊಳ್ಳುವಂಥದ್ದೇನಿಲ್ಲ. ಅಚ್ಚರಿಯ ಹಾಗೂ ಏರುಪೇರಿನ ಫಲಿತಾಂಶ ದಾಖಲಿಸಿ ಪಂದ್ಯದ ಚಿತ್ರಣವನ್ನು ಬದಲಿಸಿದರೆ ಅಷ್ಟೇ ಸಾಕು. ಹೊಸದಿಲ್ಲಿಯಲ್ಲಿ ಅಫ್ಘಾನ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಇವರಿಂದ ಎಷ್ಟರ ಮಟ್ಟಿಗೆ ಸ್ಫೂರ್ತಿ ಲಭಿಸಬಹುದು ಎಂಬ ನಿರೀಕ್ಷೆ ಸಹಜ. ಅಫ್ಘಾನ್ ಬ್ಯಾಟಿಂಗ್ ಸರದಿಯಲ್ಲಿ ಆರಂಭಕಾರ ರೆಹಮಾನುಲ್ಲ ಗುರ್ಬಜ್ ಮಾತ್ರ ಫಾರ್ಮ್ನಲ್ಲಿದ್ದಾರೆ. ಉಳಿದವರು ಡೆಲ್ಲಿಯ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಾದರೂ ಮಿಂಚುವರೇ ಎಂಬುದೊಂದು ಪ್ರಶ್ನೆ. ಬೌಲಿಂಗ್ ವಿಭಾಗಕ್ಕೆ ಬರುವುದಾದರೆ, ಆಫ್ಘಾನಿಸ್ಥಾನದ ಸ್ಪಿನ್ ವಿಭಾಗ ಬಲಿಷ್ಠ. ಹೀಗಾಗಿ ಮುಜೀಬ್ ಜದ್ರಾನ್ ಅವರಿಂದ ಬೌಲಿಂಗ್ ಆರಂಭಿಸಲಾಗುತ್ತದೆ. ರಶೀದ್ ಖಾನ್ ಟ್ರಂಪ್‌ಕಾರ್ಡ್. ಆದರೆ ಹೊಸದಿಲ್ಲಿ ಪಿಚ್ ಬ್ಯಾಟಿಂಗ್‌ಗೆ ನೆರವು ನೀಡಿದರೆ ಸ್ಪಿನ್ ಬೌಲಿಂಗ್ ಚಿಂದಿಯಾಗುವುದರಲ್ಲಿ ಅನುಮಾನವಿಲ್ಲ.