ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ (Team India) ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಸಿದ್ದತೆ ನಡೆಸುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಕೂಟಕ್ಕೆ ಮುಂಚಿತವಾಗಿ ಇಂಗ್ಲೆಂಡ್ ವಿರುದ್ದದ ಸರಣಿ ನಡೆಯಲಿದೆ. ಐದು ಟಿ20 ಪಂದ್ಯಗಳು ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಇನ್ನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ದ ಸರಣಿಗೆ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ. ತಂಡದ ನಾಯಕತ್ವದ ಬಗ್ಗೆ ಈಗಾಗಲೇ ಬಿಸಿಸಿಐ ನಿರ್ಧಾರ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಅವರೇ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಉಪ ನಾಯಕನ ವಿಚಾರಕ್ಕೆ ಬಂದರೆ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಬಿಸಿಸಿಐ ಪರಿಗಣಿಸಿದೆ ಎನ್ನಲಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಬೆನ್ನು ಸೆಳೆತಕ್ಕೆ ಒಳಗಾಗಿರುವ ಜಸ್ಪ್ರೀತ್ ಬುಮ್ರಾ ಅವರು ಕೂಟಕ್ಕೆ ಮೊದಲು ಚೇತರಿಸಿಕೊಂಡರೆ ಉಪ ನಾಯಕನ ಸ್ಥಾನ ಅವರ ಪಾಲಾಗಲಿದೆ ಎನ್ನುತ್ತಿದೆ ವರದಿ.
ಟೀಂ ಇಂಡಿಯಾದ ಉಪ ನಾಯಕನ ಸ್ಥಾನ ಯಾವತ್ತೂ ಚರ್ಚೆಯಲ್ಲಿರುವ ವಿಚಾರ. ರಾಹುಲ್ ದ್ರಾವಿಡ್ ಕೋಚ್ ಆಗಿದ್ದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಏಕದಿನ ತಂಡದ ಉಪ ನಾಯಕನಾಗಿದ್ದರು. ಕೆಲವು ಬಾರಿ ಈ ಕೆಎಲ್ ರಾಹುಲ್ ಅವರಿಗೂ ಈ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಗಂಭೀರ್ ಅಧಿಕಾರ ಪಡೆದ ಬಳಿಕ ಶುಭಮನ್ ಗಿಲ್ ಗೆ ವೈಸ್ ಕ್ಯಾಪ್ಟನ್ಸಿ ನೀಡಲಾಗಿದೆ. ಆದರೆ ಗಿಲ್ ಮುಂದುವರಿಕೆ ಕಷ್ಟ ಎನ್ನಲಾಗಿದೆ.
ಆದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಬುಮ್ರಾ ಪಾಲ್ಗೊಳ್ಳುವುದು ಖಚಿತವಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಗಾಯಗೊಂಡ ಅವರು ಮುಂಬರುವ ಇಂಗ್ಲೆಂಡ್ ವಿರುದ್ದ ಆಡುವುದಿಲ್ಲ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಮೊದಲು ಅವರು ಚೇತರಿಸಿಕೊಂಡರೆ ಅವರು ಆಡಲಿದ್ದಾರೆ.