Advertisement
ನ್ಯೂಝಿಲ್ಯಾಂಡ್ ನೀಡಿದ 213 ರನ್ನುಗಳ ಬೃಹತ್ ಗುರಿಯನ್ನು ಬೆನ್ನತ್ತಲಾರಂಭಿಸಿದ ಭಾರತದ ಆರಂಭ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (5) ಸಿಡಿಯಲು ವಿಫಲರಾದರು. ನಾಯಕ ರೋಹಿತ್ ಶರ್ಮಾ (38) ಮತ್ತು ವಿಜಯ ಶಂಕರ್ (43) ಸೇರಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ಈ ಹಂತದಲ್ಲಿ 43 ರನ್ನುಗಳನ್ನು ಗಳಿಸಿದ್ದ ವಿಜಯ ಶಂಕರ್ ಔಟಾದರು. ಬಳಿಕ ಬಂದ ರಿಷಭ್ ಪಂತ್ ಹೊಡೆಬಡಿಯ ಆಟಕ್ಕೆ ಮುಂದಾದರು. ಆದರೆ 12 ಎಸೆತಗಳಲ್ಲಿ 28 ರನ್ನು ಗಳಿಸಿ ಅವರೂ ಔಟಾದರು. ಬೆನ್ನು ಬೆನ್ನಿಗೆ ರೋಹಿತ್ ಶರ್ಮಾ, ಹಾರ್ಧಿಕ್ ಪಾಂಡ್ಯ (11 ಎಸೆತಗಳಲ್ಲಿ 21 ರನ್) ಮತ್ತು ಧೋನಿ (2) ವಿಕೆಟ್ ಬಿತ್ತು. ಆಗ ಭಾರತದ ಗೆಲುವಿಗೆ 28 ಎಸೆತಗಳಲ್ಲಿ ಇನ್ನೂ 67 ರನ್ನುಗಳ ಅಗತ್ಯವಿತ್ತು.
ಫೈನಲ್ ಓವರ್ ಟೆನ್ಷನ್
ಅಂತಿಮವಾಗಿ ಟೀಂ ಇಂಡಿಯಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್ನುಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ 2 ರನ್ ಬಂತು. ಎರಡನೇ ಎಸೆತ ಡಾಟ್ ಬಾಲ್, ಮೂರನೇ ಎಸೆತ ಮತ್ತೆ ಡಾಟ್ ಬಾಲ್ ಆಯಿತು. ನಾಲ್ಕನೇ ಎಸೆತದಲ್ಲಿ 1 ರನ್ ಬಂತು. ಐದನೇ ಎಸೆತವನ್ನು ಎದುರಿಸಿದ ಪಾಂಡ್ಯ 1 ರನ್ ಮಾತ್ರ ಗಳಿಸಿದರು. ಅಂತಿಮ ಎಸೆತದಲ್ಲಿ 12 ರನ್ನುಗಳ ಅಗತ್ಯವಿತ್ತು ಆದರೆ ಆ ಚೆಂಡನ್ನು ಅಂಪೈರ್ ವೈಡ್ ಎಂದು ಘೋಷಿಸಿದರು, ಅಂತಿಮ ಎಸೆತವನ್ನು ಕಾರ್ತಿಕ್ ಸಿಕ್ಸರ್ ಗೆ ತಳ್ಳಿದರಾದರೂ ಆ ಹೊತ್ತಿಗಾಗಲೇ ಭಾರತದ ಜಯದ ಕನಸು ಕಮರಿ ಹೋಗಿತ್ತು. ಅಂತಿಮವಾಗಿ 4 ರನ್ನುಗಳಿಂದ ಸೋಲುವ ಮೂಲಕ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಕನಸು ನನಸಾಗಲಿಲ್ಲ.
Related Articles
Advertisement