Advertisement

ಟಿ20 ವಿಶ್ವಕಪ್‌ ಕ್ರಿಕೆಟ್‌:  20 ಸಮರ್ಥ ಆಟಗಾರರ ತಂಡಕ್ಕೆ ಒಲವು

09:39 PM Jun 20, 2022 | Team Udayavani |

ಬೆಂಗಳೂರು: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಬೆಂಗಳೂರಿನ ಮಳೆಯಲ್ಲಿ ನೀರಸವಾಗಿ ಕೊನೆಗೊಂಡಿದೆ. ಭಾರತ 2-0 ಹಿನ್ನಡೆ ಬಳಿಕ ಸರಣಿಯನ್ನು 2-2 ಸಮಬಲಕ್ಕೆ ತಂದು ನಿಲ್ಲಿಸಿದ್ದೊಂದು ಗಮನಾರ್ಹ ಸಾಧನೆ. ಇದರಿಂದ ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಯಿತು? ಕಾದು ನೋಡಬೇಕು.

Advertisement

ಆಸ್ಟ್ರೇಲಿಯದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಇನ್ನಿರುವುದು ನಾಲ್ಕೇ ತಿಂಗಳು. ಇಲ್ಲಿ ಹೋರಾಡಲು 20 ಬಲಿಷ್ಠ ಆಟಗಾರರ ಪಡೆಯೊಂದನ್ನು ಕೂಡಲೇ ಅಂತಿಮಗೊಳಿಸಬೇಕಿದೆ ಎಂದು ಟೀಮ್‌ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ. ಐಸಿಸಿ ವಿಧಿಸಿದ ಗಡುವು ಸೆಪ್ಟಂಬರ್‌ 15.

“ವಿಶ್ವಕಪ್‌ನಂಥ ಪ್ರತಿಷ್ಠಿತ ಸರಣಿ ಸಮೀಪಿಸುತ್ತಿರುವಂತೆಯೇ ತಂಡದ ಸ್ವರೂಪದ ಸ್ಪಷ್ಟತೆಯೊಂದು ನಮ್ಮ ಮುಂದೆ ಇರಬೇಕಾಗುತ್ತದೆ. ವಿಶ್ವಕಪ್‌ಗೆ ಅಗತ್ಯವಿರುವುದು ಕೇವಲ 15 ಆಟಗಾರರಷ್ಟೇ ಆದರೂ 18ರಿಂದ 20 ಸದಸ್ಯರ ಬಲಿಷ್ಠ ತಂಡವೊಂದನ್ನು ನಾವು ರೂಪಿಸುವುದು ಅತ್ಯಗತ್ಯ. ಗಾಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಹೆಚ್ಚುವರಿ ಆಟಗಾರರು ಅನಿವಾರ್ಯ. ಸಾಧ್ಯವಾದಷ್ಟು ಬೇಗ ಈ ತಂಡವನ್ನು ಆಂತಿಮಗೊಳಿಸಬೇಕಿದೆ’ ಎಂಬುದಾಗಿ ದ್ರಾವಿಡ್‌ ಹೇಳಿದರು. ಇದಕ್ಕೆ ಉಳಿದಿರುವುದು 4 ಸರಣಿ ಮಾತ್ರ.

ಭಾರತವಿನ್ನು ಐರ್ಲೆಂಡ್‌ ವಿರುದ್ಧ 2 ಪಂದ್ಯಗಳ ಟಿ20 ಸರಣಿ ಆಡಲಿದೆ. ಇಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕ. ಬಳಿಕ ಇಂಗ್ಲೆಂಡ್‌ ವಿರುದ್ಧ ರೋಹಿತ್‌ ಶರ್ಮ ನಾಯಕತ್ವದಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಬಳಿಕ ವೆಸ್ಟ್‌ ಇಂಡೀಸ್‌ಗೆ ತೆರಳಿ ಅಲ್ಲಿಯೂ 3 ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಆ. 27ರಂದು ಏಷ್ಯಾ ಕಪ್‌ ಆರಂಭವಾಗಲಿದೆ. ಈ 4 ಸರಣಿಯಲ್ಲಿ ಕ್ರಿಕೆಟಿಗರ ಸಾಮರ್ಥ್ಯವನ್ನು ಅಳೆದು ತಂಡವನ್ನು ಅಂತಿಮಗೊಳಿಸಬೇಕಿದೆ.

ಅವಕಾಶ ನೀಡದೇ ಸಾಮರ್ಥ್ಯ ಅಳೆಯಲು ಸಾಧ್ಯವೇ? :

Advertisement

ವಿಪರ್ಯಾಸವೆಂದರೆ, ಐಪಿಎಲ್‌ ಬಳಿಕ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಪ್ರಯೋಗ ನಡೆಸುವಲ್ಲಿ ಹಿಂದುಳಿದದ್ದು. ಐದೂ ಪಂದ್ಯಕ್ಕೆ 11 ಸದಸ್ಯರ ಒಂದೇ ತಂಡವನ್ನು ಕಟ್ಟಿಕೊಂಡು ಆಡಲಿಳಿಯಿತು. ಐಪಿಎಲ್‌ನಲ್ಲಿ ಮಿಂಚಿದ ಉಮ್ರಾನ್‌ ಮಲಿಕ್‌, ಆರ್ಷದೀಪ್‌ ಸಿಂಗ್‌, ದೀಪಕ್‌ ಹೂಡಾ ಮತ್ತು ರವಿ ಬಿಷ್ಣೋಯಿ ಅವರಿಗೆ ಒಂದೂ ಅವಕಾಶ ನೀಡಲಿಲ್ಲ. ಅರ್ಹತೆ ಇರುವುದರಿಂದಲೇ ಇವರೆಲ್ಲ ಭಾರತ ತಂಡಕ್ಕೆ ಆಯ್ಕೆಯಾದವರು. ಆದರೆ ಕೊನೆಯ ತನಕ ಇವರು ವೀಕ್ಷಕರಾಗಿಯೇ ಉಳಿಯಬೇಕಾಯಿತು. ಒಂದೂ ಪಂದ್ಯ ಆಡಿಸದೆ ಇವರ ಸಾಮರ್ಥ್ಯವನ್ನು ಅಳೆಯುವುದು ಹೇಗೆ? ವಿಶ್ವಕಪ್‌ಗೆ ತಂಡವನ್ನು ರೂಪಿಸುವುದು ಹೇಗೆ?

ವಿಶ್ವಕಪ್‌ ಗೂ ಮುನ್ನ ಭಾರತವಿನ್ನೂ 4 ಟಿ20 ಸರಣಿ ಆಡಲಿಕ್ಕಿದೆ. ಆದರೆ ಇಲ್ಲಿ ತವರಿನ ಸರಣಿ ಇಲ್ಲ. ಹೀಗಿರುವಾಗ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲರಿಗೂ ಒಂದು ಚಾನ್ಸ್‌ ಕೊಟ್ಟು ನೋಡಬೇಕಿತ್ತು. 8 ತಿಂಗಳಲ್ಲಿ 6 ನಾಯಕರನ್ನು ಪ್ರಯೋಗಿಸಿದ ಭಾರತಕ್ಕೆ ಈ ಸಂಗತಿ ಹೊಳೆಯದಿದ್ದುದೊಂದು ಅಚ್ಚರಿ.

Advertisement

Udayavani is now on Telegram. Click here to join our channel and stay updated with the latest news.

Next