Advertisement

ಶಾಲಾರಂಭಕ್ಕೆ ಮಕ್ಕಳ, ಶಿಕ್ಷಕರ ಕೊರತೆಯ ದುಗುಡ!

04:20 AM May 29, 2018 | Karthik A |

ಸುರತ್ಕಲ್‌ : ಸುರತ್ಕಲ್‌ ಮಾ. ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ಪ್ರವೇಶ ಒಂದೆರಡು. ನೇರವಾಗಿ ಅಂಗನವಾಡಿಯಿಂದ ಒಂದನೇ ತರಗತಿಗೆ ಪ್ರವೇಶಾತಿ ಪಡೆದ 13 ಮಕ್ಕಳು. ಇಲ್ಲಿ ಗಣಿತ, ಇಂಗ್ಲಿಷ್‌ ಶಿಕ್ಷಕರಿಗೆ ನಿವೃತ್ತಿಯಾಗಿದೆ. ಇರುವ ಶಿಕ್ಷಕರ ಸಂಖ್ಯೆ ಎರಡು. ಓರ್ವರು ದೈಹಿಕ ಶಿಕ್ಷಣ ಶಿಕ್ಷಕರು. ಆದರೆ ಇಲ್ಲಿ ಸುಸಜ್ಜಿತ ಕಟ್ಟಡವಿದೆ. ಬಾವಿ ನೀರು, ಶೌಚಾಲಯ, ಆಡಲು ಸ್ವಲ್ಪ ಜಾಗವಿದೆ. ಸುಂದರ ಕೈತೋಟ ಮಾಡಿದ್ದಾರೆ. 

Advertisement

ವಿದ್ಯಾರ್ಥಿಗಳು, ಶಿಕ್ಷಕರು ಇಲ್ಲ ಎಂಬುದೇ ಕೊರತೆ!
NITK ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಏಳೆಂಟು. ಇಲ್ಲಿಯೂ ಹಸಿರು ಹೊದ್ದ ಪರಿಸರದಲ್ಲಿ ಶಾಲೆಯಿದೆ. ಶಿಕ್ಷಕರು ಮೂವರು. ಕಾನ ಕಟ್ಲ ಶಾಲೆಯಲ್ಲಿ ಬಹುತೇಕ ಏಕೋ ಪಾಧ್ಯಾಯ ಶಾಲೆ. ಇದು ಸರಕಾರಿ ಶಾಲೆಗಳಲ್ಲಿ ಶಾಲಾರಂಭಕ್ಕೆ ಸಿದ್ಧತೆ ಆಗಿದ್ದರೂ ವಿದ್ಯಾರ್ಥಿಗಳಿಗಾಗಿ ಎದುರು ನೋಡುವಂತಾಗಿದೆ.

ಶೋಚನೀಯ ಸ್ಥಿತಿ
ಕನ್ನಡ ಮಾಧ್ಯಮ ಮಾದರಿ, ಸರಕಾರಿ, ಜಿ. ಪಂ. ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಒಂದು ಅಂಕೆಗೆ ತಲುಪಿದೆ. ಶಿಕ್ಷಕರ ನೇಮಕಾತಿಗೆ ಸರಕಾರ ಮನಸ್ಸು ಮಾಡಿಲ್ಲ. ಹೀಗಾಗಿ ಖಾಸಗಿ ಶಾಲೆಗಳಿಗಿಂತ ಶ್ರೀಮಂತ ಸೌಲಭ್ಯ ಹೊಂದಿರುವ ಸರಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗುತ್ತಿದೆ. ಶಿಕ್ಷಕರು, SDMC, ಸ್ಥಳೀಯ ಸರಕಾರೇತರ ಸಂಸ್ಥೆಗಳು ಕಾರ್ಮಿಕ ವರ್ಗದ ಮನೆ ಮನೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿ, ನಾವು ಸೌಲಭ್ಯ ಒದಗಿಸುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ಕಟ್ಟಡ, ಪುಸ್ತಕ, ಶೌಚಾಲಯ ಮತ್ತಿತರ ಸೌಲಭ್ಯ ಒದಗಿಸಿದರೂ ಮಕ್ಕಳ ಪ್ರವೇಶ ಮಾತ್ರ ಆಗುತ್ತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ಕನಿಷ್ಠ  ಮಾನದಂಡವನ್ನು ಸರಕಾರ ನಿಗದಿಪಡಿಸಿದೆ. ಸುರತ್ಕಲ್‌, ಕೃಷ್ಣಾಪುರ, ಕಾಟಿಪಳ್ಳ, ಬೈಕಂಪಾಡಿ ಸಹಿತ ವಿವಿಧೆಡೆ ಆಟದ ಮೈದಾನ, ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಎಲ್ಲವೂ ಇವೆ. ಸಮರ್ಪಕ ಗ್ರಂಥಾಲಯ, ಬೋಧನ ಕಲಿಕಾ ಉಪಕರಣ, ಆಟದ ಸಾಮಗ್ರಿಗಳು ಅಗತ್ಯವಿರುವಷ್ಟು ಇಲ್ಲದಿದ್ದರೂ ಮಕ್ಕಳ ದೈಹಿಕ ವ್ಯಾಯಾಮಕ್ಕೆ ಪ್ರೋತ್ಸಾಹ ನೀಡುವಷ್ಟು ಇದೆ. ಆದರೆ ಆಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಸರಕಾರಿ ಶಾಲೆಗಳಿಗೆ ಪ್ರವೇಶಾತಿ ಮಾತ್ರ 2018-19ನೇ ಸಾಲಿನಲ್ಲಿ ಕನಿಷ್ಠ  ಮಟ್ಟಕ್ಕೆ ಇಳಿಯಲಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಸಂಪನ್ಮೂಲ ಒದಗಿಸಿ
ಯಾವುದೇ ಭೇದಭಾವ ಇಲ್ಲದೆ ಸಮಾನತೆಯ ನೆಲೆಯಲ್ಲಿ  ಶಿಕ್ಷಣ ನೀಡುವ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಪನ್ಮೂಲ ಒದಗಿಸಬೇಕಿದೆ. ಸ್ಥಳೀಯ ದಾನಿಗಳ ನೆರವಿನಿಂದ ಬರುವ ಅನುದಾನ ಗುಣಮಟ್ಟದ ಶಿಕ್ಷಣ ನೀಡುವಷ್ಟು ಸಾಲುವುದಿಲ್ಲ. ಹೀಗಾಗಿಯೇ ಸರಕಾರಿ ಶಾಲೆಗಳ ಪ್ರವೇಶಕ್ಕೆ ಮಕ್ಕಳ ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಆಂಗ್ಲ ಮಾಧ್ಯಮ ಪ್ರಭಾವ ಕೂಡ ಕನ್ನಡ ಶಾಲೆಯ ಹಿನ್ನಡೆಗೆ ಕಾರಣ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ.
– ಪ್ರಮೋದ್‌ ಆಚಾರ್ಯ, ಬೈಕಂಪಾಡಿ

Advertisement

ಸ್ವಾಗತಿಸಲು ಸಿದ್ಧತೆ 
ಮಕ್ಕಳ ಪ್ರವೇಶಾತಿ ಜೂನ್‌ ಶಾಲಾರಂಭದ ಸಮಯದಲ್ಲೇ ನಡೆಯುತ್ತದೆ. ಜೂನ್‌ 30ರ ವರೆಗೆ ಇರುತ್ತದೆ. ಹೀಗಾಗಿ ಎಷ್ಟು ಮಕ್ಕಳು ಬರುತ್ತಾರೆ ಎಂದು ನಿಖರವಾಗಿ ಹೇಳಲು ಕಷ್ಟ. ಶಿಕ್ಷಕರ ಕೊರತೆ ಆಗದಂತೆ ಶಾಲಾರಂಭದ ಸಂದರ್ಭ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳನ್ನು ಅಂದಚಂದಗೊಳಿಸಿ, ಜಾಥಾ ಮೂಲಕ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿದ್ದೇವೆ.
– ಮಂಜುಳಾ, BEO ಮಂಗಳೂರು ಉತ್ತರ

— ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next