Advertisement

ಲಾಕ್‌ಡೌನ್‌ ಮುಂದುವರಿದರೆ ಆನ್‌ಲೈನ್‌ನಲ್ಲೇ ಪಠ್ಯ ಬೋಧನೆ

03:30 AM Apr 08, 2020 | Sriram |

ಮಂಗಳೂರು: ರಾಜ್ಯದಲ್ಲಿ ಎ. 14ರ ಬಳಿಕ ಲಾಕ್‌ಡೌನ್‌ ತೆರವಾಗದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 210 ಕಾಲೇಜುಗಳಲ್ಲಿಯೂ ಆನ್‌ಲೈನ್‌ನಲ್ಲೇ ತರಗತಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಮೂರು ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿ ಆರಂಭಗೊಂಡಿದೆ.

Advertisement

ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜು, ಚಿಕ್ಕ ಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಉಡುಪಿ ತೆಂಕನಿಡಿಯೂರು ಕಾಲೇಜುಗಳಲ್ಲಿ ಈಗಾಗಲೇ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು, ಅದರಲ್ಲಿ ಪ್ರಶ್ನೋತ್ತರ, ಕ್ರಿಯಾಯೋಜನೆ ಸಿದ್ಧಪಡಿಸುವಿಕೆಗೆ ವಿಷಯಗಳನ್ನು ನೀಡುವಂತದ್ದು, ವಿದ್ಯಾರ್ಥಿಗಳ ಗೊಂದಲ ನಿವಾರಣೆ ಇತ್ಯಾದಿ ಮಾಡಲಾಗುತ್ತಿದೆ ಎಂದು ವಿ.ವಿ. ಉಪಕುಲಪತಿ ತಿಳಿಸಿದ್ದಾರೆ.

ಝೂಮ್‌ ಆ್ಯಪ್‌ನಲ್ಲಿ ತರಗತಿಗೆ ಚಿಂತನೆ
ವಿದ್ಯಾರ್ಥಿಗಳಿಗೆ ಪಠ್ಯ ಪೂರ್ಣಗೊಳಿಸದೆ ಅನ್ಯ ದಾರಿ ಇಲ್ಲ. ಲಾಕ್‌ಡೌನ್‌ ಸಡಿಲಿಕೆ ಆಗದಿದ್ದಲ್ಲಿ ವಾಟ್ಸ್‌ ಆ್ಯಪ್‌ ಅಲ್ಲದೆ ಝೂಂ ಆ್ಯಪ್‌ ಮುಖಾಂತರವೂ ತರಗತಿ ನಡೆಸಲು ಚಿಂತಿಸಲಾಗುತ್ತಿದೆ. ಇದರಲ್ಲಿ ಗರಿಷ್ಠ 100 ಮಂದಿ 40 ನಿಮಿಷಗಳ ಕಾಲ ವೀಡಿಯೋ ಕಾನ್ಫರೆನ್ಸ್‌, ಆನ್‌ಲೈನ್‌ ಮೀಟಿಂಗ್‌ ಮತ್ತು ಗ್ರೂಪ್‌ ಮೆಸೇಜಿಂಗ್‌ ಮಾಡಲು ಅವಕಾಶವಿದೆ.

ಪಠ್ಯ ಪೂರ್ಣಗೊಳಿಸಿಯೇ ಪರೀಕ್ಷೆ
ಎ. 12ರ ವೇಳೆಗೆ ತರಗತಿ ಮುಗಿದು, ಎಪ್ರಿಲ್‌ ಅಂತ್ಯದ ವೇಳೆಗೆ ಪರೀಕ್ಷೆ ನಡೆಸಬೇಕಿತ್ತು. ಆದರೆ ಮಾ. 23ರಿಂದ ರಜೆ ಇರುವ ಕಾರಣ ಒಂದು ತಿಂಗಳ ಪಠ್ಯ ಅಪೂರ್ಣವಾಗಿದೆ. ಲಾಕ್‌ಡೌನ್‌ ಮುಗಿದ ಬಳಿಕ ಬಾಕಿ ಉಳಿದಿರುವ ಪಠ್ಯವನ್ನು ಪೂರ್ಣಗೊಳಿಸಿಯೇ ಪದವಿ ಪರೀಕ್ಷೆಗಳನ್ನು ನಡೆಸಲು ವಿ.ವಿ. ತೀರ್ಮಾನಿಸಿದೆ.

ಎಂಜಿನಿಯರಿಂಗ್‌ಗೆ ಆನ್‌ಲೈನ್‌ ತರಗತಿ
ಕೆಲವು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ನಿಟ್ಟೆ ಎಂಜಿನಿಯರ್‌ ಕಾಲೇಜು, ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು, ವಳಚ್ಚಿಲ್‌ ಶ್ರೀನಿವಾಸ ಕಾಲೇಜು ಸೇರಿದಂತೆ ಇತರ ಕೆಲವು ಕಾಲೇಜುಗಳಲ್ಲಿ ಈಗಾಗಲೇ ಆನ್‌ಲೈನ್‌ ತರಗತಿ ಆರಂಭಗೊಂಡಿದ್ದು, ಸ್ಕೈಪ್‌, ವಾಟ್ಸಾಪ್‌ ಮುಂತಾದ ತಾಣಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಬೋಧನೆ ನಡೆಯುತ್ತಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ಇರುವುದರಿಂದ ಸುಮಾರು ಒಂದು ತಿಂಗಳ ಪಠ್ಯ ಬೋಧನೆ ಬಾಕಿ ಇದೆ. ಲಾಕ್‌ಡೌನ್‌ ಎ. 14ರಂದು ತೆರವಾಗದೇ ಇದ್ದಲ್ಲಿ ಆನ್‌ಲೈನ್‌ನಲ್ಲೇ ಬೋಧನೆಗೆ ಅವಕಾಶ ಕಲ್ಪಿಸಲಾಗುವುದು.
ಪ್ರೊ| ಪಿ.ಎಸ್‌. ಎಡಪಡಿತ್ತಾಯ,
ಮಂಗಳೂರು ವಿ.ವಿ. ಉಪಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next