ಹುಣಸೂರು: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಶಿಕ್ಷಕರು, ವಿದ್ಯಾರ್ಥಿಗಳ ಶೆಕ್ಷಣಿಕ ಪ್ರಗತಿ ಜೊತೆಗೆ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಶ್ರಮ ಹಾಕಿದಲ್ಲಿ ಅದುವೇ ಶಿಕ್ಷಕರು ದೇಶಕ್ಕೆ ಕೊಡುವ ದೊಡ್ಡ ಕಾಣಿಕೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಶಿಕ್ಷಕರ ಭವನದಲ್ಲಿ ನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ಶಿವಣ್ಣರಿಗೆ ಬೀಳ್ಕೊಡುಗೆ ಹಾಗೂ ನೂತನ ಬಿಇಒ ಎಸ್.ರೇವಣ್ಣರಿಗಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಇಬ್ಬರು ಶಿಕ್ಕರನ್ನು ಸನ್ಮಾನಿಸಿ ಮಾತನಾಡಿದರು.
ಶಿವಣ್ಣ ಸೇರಿದಂತೆ ಹಿಂದಿನ ಬಿಇಒ ಅವರು ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ತಾಲೂಕಿನಲ್ಲಿ ಕಳೆದ 10 ವರ್ಷಗಳಲ್ಲಿ ಫಲಿತಾಂಶ ವೃದ್ಧಿಯಾಗಿರುವುದು ಹಾಗೂ ಶಿಕ್ಷಣ ಇಲಾಖೆಯಿಂದ ದೂರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ನನಗೆ ಸಂತಸ ತಂದಿದೆ ಎಂದರು.
ಕರ್ತವ್ಯದಲ್ಲಿ ರಾಜಿಯಿಲ್ಲ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಶಿಕ್ಷಕರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವುದಾಗಿಯೂ ಆದರೆ, ಕರ್ತವ್ಯ ನಿರ್ವಹಣೆಯಲ್ಲಿ ರಾಜಿಯಿಲ್ಲವೆಂದು ಎಚ್ಚರಿಸಿದರು. ನಿವೃತ್ತ ಬಿಇಒ ಬಿ.ಕೆ.ಶಿವಣ್ಣ ತಮ್ಮ ಮೂರು ವರ್ಷಗಳ ಅಧಿಕಾರಾವಧಿಯ ವೇಳೆ ಸಂಪೂರ್ಣ ಸಹಕಾರ ನೀಡಿದ ಶಾಸಕರು ಮತ್ತು ಶಿಕ್ಷಕರು, ಇಲಾಖಾ ಸಿಬ್ಬಂದಿಗಳಿಗೆ ವಂದನೆ ಸಲ್ಲಿಸಿದರು.
ಸಭೆಯಲ್ಲಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ಚನ್ನವೀರಪ್ಪ, ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಗೋವಿಂದೇಗೌಡ, ಮುಖ್ಯ ಶಿಕ್ಷಕ ಸಿದ್ದರಾಜು, ಸಿಆರ್‌ಪಿ ನರಸಿಂಹ ಮಾತನಾಡಿ ಬಿಇಒ ಅವರುಗಳ ಕಾರ್ಯತತ್ಪರತೆ ಹಾಗೂ
ಶಾಸಕರ ಶೆಕ್ಷಣಿಕ ಪ್ರಗತಿಗೆ ನೀಡುತ್ತಿರುವ ಸಹಕಾರವನ್ನು ಪ್ರಶಂಸಿಸಿದರು. ಇಸಿಒ ಮೊಗಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಸುಂದರ್, ಕೇಶವ್,ರಂಗಸ್ವಾಮಿ, ಬಾಲಚಂದ್ರ ಸೇರಿದಂತೆ ಶಿಕ್ಷಕರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಜರಿದ್ದರು.