Advertisement
ಶಾಲೆಗೆ ಮೀಸಲಾಗಿರುವ ಸುಮಾರು 50 ಸೆಂಟ್ಸ್ ಜಾಗದಲ್ಲಿ ಈ ತರಕಾರಿ ತೋಟವನ್ನು ನಿರ್ಮಿಸಲಾಗಿದೆ. ಕಾರಡ್ಕ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಕೆಲಸವನ್ನು ಶಾಲೆಯ ಅಭಿವೃದ್ಧಿ ಕೆಲಸಕ್ಕೆ ಮೀಸಲಿಟ್ಟಿತ್ತು. ಈ ಮೂಲಕ ತರಕಾರಿ ತೋಟದ ಯೋಜನೆ ರೂಪುಗೊಂಡಿತು.
ಉದ್ಯೋಗ ಖಾತರಿ ಯೋಜನೆಯ 100 ದಿನಗಳ ಕೆಲಸದಲ್ಲಿ ಶಾಲೆಯ ತರಕಾರಿ ತೋಟಕ್ಕೆ ಬೇಕಾದ ಸ್ಥಳವನ್ನು ಸಮತಟ್ಟು ಮಾಡಿ ಹದಗೊಳಿಸಲಾಯಿತು. ತರಕಾರಿ ಬೀಜಗಳನ್ನು ನೆಡಲು ಸಾಲುಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಯಿತು. ತೋಟದ ಸುತ್ತ ಪ್ರಾಣಿಗಳ ಹಾವಳಿ ತಪ್ಪಿಸಲು ಬೇಲಿ ಹಾಕಲಾಯಿತು. ಇಲಾಖೆಯಿಂದ ಸಹಾಯಧನ
ಕೃಷಿ ಇಲಾಖೆಯಿಂದ 5,000 ರೂ. ಸಹಾಯಧನದ ಜತೆಗೆ ತೋಟಕ್ಕೆ ಬೇಕಾದ ಟೊಮೆಟೊ, ಬದನೆಕಾಯಿ, ಮೆಣಸು, ಬೆಂಡೆಕಾಯಿ ಲಭಿಸಿತು. ಇತರ ಬೀಜಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಯಿತು. ಜುಲೈ ತಿಂಗಳ ಕೊನೆ ವಾರದಲ್ಲಿ ಶಾಲಾ ಮಕ್ಕಳಿಂದ ಬೀಜ ಬಿತ್ತನೆ ಕಾರ್ಯ ನಡೆಸಲಾಯಿತು.
Related Articles
ಬೀಜ ಬಿತ್ತನೆ ಅನಂತರ ತೋಟಕ್ಕೆ ಸೊಪ್ಪು, ಹಟ್ಟಿ ಗೊಬ್ಬರ ವನ್ನು ಗ್ರಾಮಸ್ಥರು ಸಹಿತ ಶಾಲಾ ಮಕ್ಕಳು, ಸಿಬಂದಿ ಹಾಕಿದರು. ದಿನನಿತ್ಯ ನೀರು ಹಾಕುತ್ತಿದ್ದುದರಿಂದ ತರಕಾರಿ ಗಿಡಗಳು ಉತ್ತಮವಾಗಿ ಬೆಳೆದವು. ಅಷ್ಟರಲ್ಲಿ ರೋಗ ಬಾಧೆ ಎದುರಾದ ಕಾರಣ ಅನಿವಾರ್ಯವಾಗಿ ಔಷಧ ಸಿಂಪಡಿಸಲಾಯಿತು. ರೋಗ ಹತೋಟಿಗೆ ಬಂದಾಗ, ಮತ್ತೆ ಕೋಳಿ ಗೊಬ್ಬರವನ್ನು ತೋಟಕ್ಕೆ ಹಾಕಲಾಯಿತು. ಚಿಗುರೊಡೆದ ಗಿಡಗಳು ಮತ್ತಷ್ಟು ಹುಲುಸಾಗಿ ಬೆಳೆದವು. ಪ್ರಸ್ತುತ ಉತ್ತಮ ಫಸಲು ಲಭಿಸುತ್ತಿದೆ.
Advertisement
ಬಾಳೆ ಫಸಲು ನಿರೀಕ್ಷೆಯಲ್ಲಿತರಕಾರಿ ತೋಟದಲ್ಲಿ ತರಕಾರಿ ಮಾತ್ರವಲ್ಲದೆ ಬಾಳೆಗಿಡಗಳನ್ನು ಕೂಡ ಬೆಳೆಯಲಾಗುತ್ತಿದೆ. ಸುಮಾರು 50 ಬಾಳೆ ಗಿಡಗಳನ್ನು ನೆಡಲಾಗಿದೆ. ಮುಂಬರುವ ವರ್ಷದಲ್ಲಿ ಫಸಲು ಬರಬಹುದು ಎನ್ನುವ ನಿರೀಕ್ಷೆ ಇರಿಸಲಾಗಿದೆ. ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದಕ್ಕೋಸ್ಕರ ತರಕಾರಿ ತೋಟ ಪ್ರಾರಂಭಿಸಲಾಯಿತು. ಶಾಲೆಯ ತರಕಾರಿ ವೆಚ್ಚ ಕಡಿಮೆಯಾಗಿದೆ. ಮಕ್ಕಳಿಗೆ ವಿಷರಹಿತ ತರಕಾರಿ ಸೇವನೆ ನಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳುತ್ತಾರೆ ಶಾಲಾ ಶಿಕ್ಷಕ-ಶಿಕ್ಷಕಿಯರು. ಮಕ್ಕಳಿಂದ ತರಕಾರಿ ಕೊಯ್ಲು
ತರಕಾರಿ ತೋಟದಲ್ಲಿ ಬದನೆಕಾಯಿ, ಮುಳ್ಳುಸೌತೆ, ಬೆಂಡೆಕಾಯಿ, ಚೀನಿ ಕಾಯಿ, ಕುಂಬಳಕಾಯಿ, ಟೊಮೆಟೊ, ಬಸಳೆ, ಹರಿವೆ, ಅಲಸಂಡೆ, ಮೆಣಸು, ತೊಂಡೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ವಾರದಲ್ಲಿ 2 ದಿನ ಶಾಲಾ ಮಕ್ಕಳು ಸೇರಿ ತರಕಾರಿ ಕೊಯ್ಲು ಮಾಡುತ್ತಿದ್ದಾರೆ. ಅದನ್ನು ಶಾಲೆಯ ಮಧ್ಯಾಹ್ನದ ಊಟಕ್ಕೆ ಬಳಸುತ್ತಾರೆ. ಇಂತಹ ಅದ್ಭುತ ಕಾರ್ಯಕ್ಕೆ ಶಾಲೆಯ ವ್ಯವಸ್ಥಾಪಕರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ, ಕೃಷಿ ಇಲಾಖೆಯವರು ಸಹಕಾರ ನೀಡಿದ್ದಾರೆ. ಸ್ವಾವಲಂಬನೆ ಉದ್ದೇಶ
ಶಾಲಾ ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದು ಈ ತರಕಾರಿ ತೋಟದ ಉದ್ದೇಶವಾಗಿದೆ. ಶಾಲೆಯ ಎಲ್ಲ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪೋಷಣೆಯ ಕಾರ್ಯವನ್ನೂ ಅವರು ನಡೆಸುತ್ತಾರೆ. ಉತ್ತಮ ಫಸಲು ಬರುತ್ತಿದೆ. ತರಕಾರಿಗಳನ್ನು ಮಕ್ಕಳ ಭೋಜನಕ್ಕೆ ಬಳಸಲಾಗುತ್ತಿದೆ.
– ಪ್ರಶಾಂತ್
ಮುಖ್ಯೋಪಾಧ್ಯಾಯರು ಶಿವಪ್ರಸಾದ್ ಮಣಿಯೂರು