Advertisement
ಮೈಸೂರು ಮಾನಸ ಗಂಗೋತ್ರಿ ವಿ.ವಿ.ಯ ಕುಲಪತಿ ಆಗಿದ್ದ ಡಾ| ದೇ. ಜವರೇಗೌಡ ಮತ್ತು ಅವರ ಪುತ್ರ ಶಶಿಧರ್ ಪ್ರಸಾದ್ ಅವರ ಹುಟ್ಟೂರಾಗಿರುವ ಚಕ್ಕೆರೆ ಗ್ರಾಮ ಬಹುತೇಕ ಮನೆಗೊಬ್ಬ ಶಿಕ್ಷಕರನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮದ ಜನತೆ ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಗ್ರಾಮದ ಶೇ. 70 ಕುಟುಂಬ ಶಿಕ್ಷಕರಾಗಿದ್ದರೆ, ಶೇ. 30 ಕುಟುಂಬಗಳು ಕೃಷಿ ಸೇರಿ ಇತರ ಕ್ಷೇತ್ರಗಳಲ್ಲಿ ತೊಡಗಿವೆ.
ದೇ. ಜವರೇಗೌಡ, ಅವರ ಪುತ್ರ ಶಶಿಧರ್ ಪ್ರಸಾದ್, ಜಾನಪದ ವಿದ್ವಾಂಸ ಡಾ| ಚಕ್ಕೆರೆ ಶಿವಶಂಕರ್, ಸಿ.ಪಿ. ನಾಗರಾಜು ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವವರ ಪಟ್ಟಿ ಸಾಕಷ್ಟಿದೆ. ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಂದೆ ಪುಟ್ಟಮಾದೇಗೌಡರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇವರೊಂದಿಗೆ ನಿವೃತ್ತರಾಗಿರುವ 200ಕ್ಕೂ ಹೆಚ್ಚು ಶಿಕ್ಷಕರು ಗ್ರಾಮದಲ್ಲಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದವರು, ಸೇವೆ ಸಲ್ಲಿಸುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. “ನಮ್ಮ ಊರು ಶಿಕ್ಷಕರ ಐಕಾನ್ ಎನಿಸಿದೆ. ಗ್ರಾಮದಲ್ಲಿ ಸಾಕಷ್ಟು ಮಂದಿ ಶಿಕ್ಷಕರಾಗಿದ್ದಾರೆ. ಕೇವಲ ಶಿಕ್ಷಕರಷ್ಟೆ ಅಲ್ಲ ಬೇರೆ ಬೇರೆ ಕ್ಷೇತ್ರಕ್ಕೂ ಈ ಗ್ರಾಮ ಕೊಡುಗೆ ಕೊಟ್ಟಿದೆ. ಗ್ರಾಮದಲ್ಲಿ ಡಿಇಡಿ, ಬಿಇಡಿ, ಎಂಎ, ಎಂಫಿಲ್, ಪಿಎಚ್‌ಡಿ, ಎಂ.ಇಡಿ ಮೊದಲಾದ ಸ್ನಾತಕೋತ್ತರ ಪದವಿ ಪಡೆದುಕೊಂಡವರ ದಂಡೇ ಇದೆ.” -ಯೋಗೇಶ್ ಚಕ್ಕೆರೆ, ಶಿಕ್ಷಣ ಸಂಯೋಜಕ