Advertisement
ಕಳೆದ ನಾಲ್ಕು ವರ್ಷದಲ್ಲಿ ಮೂರು ಸರ್ಕಾರಗಳು, ಐವರು ಶಿಕ್ಷಣ ಸಚಿವರು ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡು ಅಲ್ಪ ಕಾಲ ಖುದ್ದು ಮುಖ್ಯಮಂತ್ರಿಯೇ ಇಲಾಖೆ ನಿರ್ವಹಣೆ ಮಾಡಿದರೂ ಹತ್ತು ಸಾವಿರ ಶಿಕ್ಷಕರ ವರ್ಗಾವಣೆ ಮರೀಚಿಕೆಯಾಗಿಯೇ ಉಳಿದಿದೆ.
Related Articles
Advertisement
ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಪುನರ್ ರಚನೆ ಮಾಡಲಾಯಿತು. ತನ್ವೀರ್ ಸೇs್ ಹೊಸ ಸಚಿವರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾತೆ ವಹಿಸಿಕೊಂಡರು. ವರ್ಗಾವಣೆ ಪ್ರಕ್ರಿಯೆ ಸಲೀಸಾಗಿ ನಡೆಸುವಂತೆ ಶಿಕ್ಷಕರ, ಶಿಕ್ಷಕ ಸಂಘಟನೆಗಳ ಒತ್ತಡ ದಿನೇದಿನೇ ಹೆಚ್ಚಾಯಿತು. 2017ರಲ್ಲಿ ಸಚಿವ ತನ್ವೀರ್ ಸೇs್ ಮತ್ತು ಅಂದಿನ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2017 ಸದನದಲ್ಲಿ ಮಂಡಿಸಿತ್ತು. ಇದಕ್ಕೆ ಕಡ್ಡಾಯ ವರ್ಗಾವಣೆ ಎಂಬ ಹೊಸದೊಂದು ಪದವನ್ನು ಸೇರಿಸಲಾಗಿತ್ತು. ಬಿಜೆಪಿಗರು ಉಭಯ ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೇ ಚರ್ಚೆ ಇಲ್ಲದೇ ಈ ಕಾಯ್ದೆ ಅಂಗೀಕಾರಗೊಂಡಿದೆ. ಕಡ್ಡಾಯ ವರ್ಗಾವಣೆ ಎಂದರೇನು ಎಂಬುದು ಐದು ನಿಮಿಷವೂ ಚರ್ಚೆಯಾಗಿಲ್ಲ. ತಿದ್ದುಪಡಿಗೆ ರಾಜ್ಯಪಾಲರ ಅಂಕಿತವೂ ದೊರೆಯಿತು. ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸಿದರೂ ಶಿಕ್ಷಕರ ವರ್ಗಾವಣೆ ಮಾತ್ರ ಆಗಿಲ್ಲ. ನಾಲ್ಕೈದು ಬಾರಿ ಪರಿಷ್ಕೃತ ವೇಳಾಪಟ್ಟಿ, ಕೌನ್ಸೆಲಿಂಗ್ ದಿನಾಂಕ ಇತ್ಯಾದಿ ಎಲ್ಲವನ್ನು ಇಲಾಖೆ ಹೊರಡಿಸಿತ್ತು. ಸುಮಾರು 72 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವರ್ಗಾವಣೆ ಪ್ರಕ್ರಿಯೆ ಮಾತ್ರ ಕಾಗದದಲ್ಲೇ ಉಳಿದು ಬಿಟ್ಟಿತ್ತು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಬಿಎಸ್‌ಪಿ ಏಕೈಕ ಶಾಸಕ ಎನ್.ಮಹೇಶ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಎನ್.ಮಹೇಶ್ ಅವರಿಗೆ ವರ್ಗಾವಣೆಯ ಬಿಸಿ ತಟ್ಟಿತು. ಹೀಗಾಗಿ ಮತ್ತೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)ವಿಧೇಯಕ ತಿದ್ದುಪಡಿ ತರಲು ಮುಂದಾದರು. ಶಿಕ್ಷಕರ ಸೇವಾವಧಿ, ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರಿಗೆ ವಿನಾಯ್ತಿ ಇತ್ಯಾದಿ ಹಲವು ಅಂಶಗಳನ್ನು ಒಳಗೊಂಡಂತೆ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಉಭಯ ಸದನದಲ್ಲಿ ಮಂಡಿಸಲಾಯಿತು. ಶೇ.5ಷ್ಟು ಕಡ್ಡಾಯ ವರ್ಗಾವಣೆ ಮಾಡುವ ಕ್ರಮವನ್ನು ಸಮ್ಮಿಶ್ರ ಸರ್ಕಾರವೂ ಮುಂದುವರಿಸಿತು. ಎ-ವಲಯ(ನಗರ ಪ್ರದೇಶ)ದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರನ್ನು ಸಿ-ವಲಯ(ಗ್ರಾಮೀಣ ಪ್ರದೇಶ) ಅಥವಾ ಬಿ-ವಲಯ(ಪಟ್ಟಣ ಪ್ರದೇಶ)ಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡುವ ನಿಯಮ ಇದಾಗಿತ್ತು. ಇದರಿಂದ ಕಡ್ಡಾಯ ವರ್ಗಾವಣೆ ಬೇಕು ಮತ್ತು ಕಡ್ಡಾಯ ವರ್ಗಾವಣೆ ಬೇಡ ಎಂಬ ಎರಡು ವರ್ಗ ಹುಟ್ಟಿಕೊಂಡವು. ತಿದ್ದುಪಡಿಗೆ ಸದನದ ಒಪ್ಪಿಗೆ ಸಿಕ್ಕಿತು. ರಾಜ್ಯಪಾಲರಿಂದ ಅಂಕಿತವೂ ದೊರೆಯಿತು. ಆದರೆ ವರ್ಗಾವಣೆ ಮಾತ್ರ ಆಗಿಲ್ಲ. ಈ ವೇಳೆ ವೈಯಕ್ತಿಕ ಕಾರಣಕ್ಕಾಗಿ ಎನ್. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಖಾತೆಯನ್ನು ತಮ್ಮ ಬಳಿ ಉಳಿಸಿಕೊಂಡಿದ್ದರು. ವರ್ಗಾವಣೆ ಪ್ರಕ್ರಿಯೆ ಆಗಿಂದಾಗ್ಗೆ ಸ್ಥಗಿತಗೊಳ್ಳುತ್ತಿರುವುದಕ್ಕೆ ರಾಜ್ಯಾದ್ಯಂತ ಶಿಕ್ಷಕರು ಅಕ್ರೋಶ ಗೊಂಡಿದ್ದರು. ಶಿಕ್ಷಕರ ಸಂಘಟನೆಯಿಂದ ಸರ್ಕಾರದ ಮೇಲೆ ಒತ್ತಡಗಳು ಹೇರುತ್ತಲೇ ಇದ್ದರು. ವಿಧಾನ ಪರಿಷತ್ ಸದಸ್ಯರು ವರ್ಗಾವಣೆಗಾಗಿ ಒತ್ತಾಯಿಸಿದರು. 2018ರಲ್ಲಿ ಸಮ್ಮಿಶ್ರ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ)ವಿಧೇಯಕ ತಿದ್ದುಪಡಿಗೆ ಉಭಯ ಸದಸನದಲ್ಲಿ ಮಂಡಿಸಿತು. ಅಂಗೀಕರಾಗೊಂಡಿಲ್ಲ. ನಂತರ 2019ರ ಫೆಬ್ರವರಿಯಲ್ಲಿ ನಡೆದ ಅಧಿವೇಶನದಲ್ಲಿ ಕಾಯ್ದೆ ತಿದ್ದುಪಡಿಗಾಗಿ ಮಂಡಿಸಲಾಯಿತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ವಿಧಾನ ಪರಿಷತ್‌ನಲ್ಲಿ ಅಂದಿನ ಆಡಳಿತ ಪಕ್ಷದ ಸದಸ್ಯರ ವಿರೋಧದ ನಡುವೆಯೂ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡಿತು. ರಾಜ್ಯಪಾಲರ ಅಂಕಿತ ಕೂಡ ಬಿದ್ದಿತ್ತು.
ಶಿಕ್ಷಕರ ಆಕ್ರೋಶಕ್ಕೆ ಕಾರಣಕಡ್ಡಾಯ ವರ್ಗಾವಣೆಗೆ ಶಿಕ್ಷಕರಿಂದಲೇ ತೀವ್ರ ವಿರೋಧ ವ್ಯಕ್ತವಾಯಿತು. ದಂಪತಿ ಶಿಕ್ಷಕರಿಗೆ ಎಲ್ಲ ವಿಭಾಗದಲ್ಲಿ ಆದ್ಯತೆ ಹೆಚ್ಚುತ್ತಿದೆ. ಸೇವಾಜೇಷ್ಠತೆಯ ಆಧಾರದಲ್ಲಿ ಶಿಕ್ಷಕರಿಗೆ ವರ್ಗಾವಣೆ ಸಿಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರಲಾರಂಭಿಸಿತು. ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವೇಳೆಯಲ್ಲಿ ಶಿಕ್ಷಕರೇ ಪ್ರತಿಭಟನೆ ನಡೆಸಲು ಆರಂಭಿಸಿದರು. ಹೊಸ ಸರ್ಕಾರ ಕೂಡ ರಚನೆಯಾಯಿತು. ಎಸ್.ಸುರೇಶ್ ಕುಮಾರ್ ಸಚಿವರಾದರು, ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದರು. ಸಮಸ್ಯೆ ತಕ್ಷಣದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಪುನರ್ ಆರಂಭಿಸಲು ಸೂಚನೆ ನೀಡಿದರು ಮತ್ತು ಅತಿ ಶೀಘ್ರದಲ್ಲಿ ಕಾಯ್ದೆಗೆ ತಿದ್ದಿಪಡಿ ತರುವ ಜತೆಗೆ ಕಡ್ಡಾಯ ವರ್ಗಾವಣೆ ಎಂಬ ಪದ ಬದಲಿಸುತ್ತೇವೆ ಎಂದು ಶಿಕ್ಷಕರಿಗೆ ಭರವಸೆಯನ್ನು ನೀಡಿದ್ದಾರೆ. ಈಗ ಹಳೇ ನಿಯಮದಡಿಯಲ್ಲೇ ವರ್ಗಾವಣೆ ನಡೆಯುತ್ತಿದೆ. ಶಿಕ್ಷಕರ ಸಮಸ್ಯೆ ಬಗೆಹರಿದಿಲ್ಲ. ಕೌನ್ಸೆಲಿಂಗ್ ವೇಳೆ ಅರ್ಹತೆಯಿದ್ದರೂ ಅವಕಾಶ ಸಿಗದೇ ಇರುವುದಕ್ಕೆ ಪ್ರತಿರೋಧಿಸುತ್ತಿರುವುದು ನಿಂತಿಲ್ಲ. ಒಟ್ಟಿನಲ್ಲಿ ವರ್ಗಾವಣೆಯ ಜಟಿಲ ಜಾಲದಲ್ಲಿ ಶಿಕ್ಷಕರು ಜತೆ ಸರ್ಕಾರ ಸಿಕ್ಕಿಕೊಂಡಿದೆ.
ಹೊಸ ತಿದ್ದುಪಡಿಯೇನು?
ಇದರಲ್ಲಿ ಮುಖ್ಯವಾಗಿ ಕೆಲವೊಂದು ತಿದ್ದುಪಡಿ ಮಾಡಲಾಗಿತ್ತು. ಭರ್ತಿಯಾಗದೇ ಖಾಲಿ ಉಳಿದ ಸ್ಥಾನಕ್ಕೆ ಸರ್ಕಾರದಿಂದ ನೇರ ವರ್ಗಾವಣೆ ಮಾಡುವ ಅಕಾಶವನ್ನು ಅಂದಿನ ಸರ್ಕಾರ ಮಾಡಿಕೊಂಡಿತ್ತು. ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಇದ್ದ ಕನಿಷ್ಠ ಸೇವಾವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಿತ್ತು. ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳು ನಗರ ಪ್ರದೇಶದ ವ್ಯಾಪ್ತಿಯೊಳಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಎ ವಲಯ(ನಗರ ಪ್ರದೇಶ)ದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಿ ವಲಯ(ಗ್ರಾಮೀಣ ಪ್ರದೇಶ)ಕ್ಕೆ ಶೇ.5ರಷ್ಟು ಮಿತಿಯಲ್ಲಿ ಕಡ್ಡಾಯ ವರ್ಗಾವಣೆ ಮುಂದುವರಿಸಿತ್ತು. ಒಬ್ಬ ಶಿಕ್ಷಕ ಅಥವಾ ಆ ಶಿಕ್ಷಕ ದಂಪತಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆ ಎಲ್ಲಿಯೂ ದೊರೆಯದಿದ್ದಲ್ಲಿ, ದಂಪತಿ ಶಿಕ್ಷಕರ ವರ್ಗಾವಣೆಗಾಗಿ ಒಂದೇ ಸ್ಥಳದಲ್ಲಿ ನಿಯೋಜಿಸಲು ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿತ್ತು. ದಂಪತಿ ಶಿಕ್ಷಕರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ಆ ಪ್ರದೇಶಕ್ಕೆ ವರ್ಗಾವಣೆ ಮಾಡಲು ತಿದ್ದುಪಡಿ ತರಲಾಗಿತ್ತು. ಈ ನಿಯಮದಂತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಾಫ್ಟ್ ವೇರ್ ಕೂಡ ಸಿದ್ಧಪಡಿಸಲಾಯಿತು. ಹೊಸದಾಗಿ ಅರ್ಜಿ ಆಹ್ವಾನಿಸಿ, ಹಳೇ ಅರ್ಜಿ ತಿದ್ದುಪಡಿಗೂ ಅವಕಾಶ ನೀಡಲಾಯಿತು. ಅಂತೂ ಜೂನ್ ಅಂತ್ಯಕ್ಕೆ ವರ್ಗಾವಣೆ ಪ್ರಕ್ರಿಯೆಯೂ ಆರಂಭವಾಗಿತ್ತು. ಸಮ್ಮಿಶ್ರ ಸರ್ಕಾರದ ಕೊನೆಯ ಘಟ್ಟದಲ್ಲಿ ಎಸ್.ಆರ್.ಶ್ರೀನಿವಾಸ್ ಇಲಾಖೆಯ ಸಚಿವರಾದರು. ಇಲಾಖೆಯ ಅಧಿಕಾರಿಗಳ ಸಭೆ ಕರೆದು, ವರ್ಗಾವಣೆ ವಿಚಾರವಾಗಿಯೂ ಚರ್ಚೆ ನಡೆಸಿದ್ದರು. ಅಷ್ಟೊತ್ತಿಗೆ ಸರ್ಕಾರವೇ ಪತನಗೊಂಡಿತು. ಅಧಿಕಾರಿಗಳು ಹೊಸ ತಿದ್ದುಪಡಿಯಂತೆ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಿದರು.
ಅರ್ಹತೆ ಇದ್ದರೂ…
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1,64,909 ಹಾಗೂ ಪ್ರೌಢಶಾಲೆಯಲ್ಲಿ 40,708 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಶಿಕ್ಷಕರು ವರ್ಗಾವಣೆ ಪಡೆಯಲು ಅರ್ಹರಿದ್ದಾರೆ. ಆದರೆ, ಜಟಿಲ, ಗೊಂದಲದಿಂದ ಕೂಡಿರುವ ನಿಯಮವು ಯಾರೊ ಬ್ಬರಿಗೂ ಸೇವಾ ಜೇಷ್ಠತೆಯ ಆಧಾರದಲ್ಲಿ ಸಲೀಸಾಗಿ ವರ್ಗಾವಣೆ ಪಡೆಯಲು ಅವಕಾಶ ನೀಡುತ್ತಿಲ್ಲ.
– ರಾಜು ಖಾರ್ವಿ ಕೊಡೇರಿ