ಬೆಂಗಳೂರು: ಶಾಲಾ ಶಿಕ್ಷಕರ ಅನುಕೂಲಕ್ಕಾಗಿ ಶೀಘ್ರದಲ್ಲೇ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿದ ಸಂಘದ ನಿಯೋಗವು, ಶಿಕ್ಷಕರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದೆ. ಸರಕಾರ ಹೊಸದಾಗಿ ಜಾರಿಗೆ ತಂದಿರುವ ಶಿಕ್ಷಕರ ವರ್ಗಾವಣೆ ಕಾಯ್ದೆ ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸಲು ವೇಳಾಪಟ್ಟಿ ಪ್ರಕಟಿಸಬೇಕು.
ಕಳೆದ ಸಾಲಿನಲ್ಲಿ ಕೆಲವು ಶಿಕ್ಷಕರು ಕಡ್ಡಾಯ ಅಥವಾ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದು, ಅಂತಹ ಶಿಕ್ಷಕರಿಗೆ ನೆರವಾಗುವ ಉದ್ದೇಶದಿಂದ ನೂತನ ವರ್ಗಾವಣೆ ಕಾಯ್ದೆಯಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.
ಪ್ರಸಕ್ತ ಸಾಲಿನ ವರ್ಗಾವಣೆಗೂ ಮೊದಲು ಖಾಲಿ ಹುದ್ದೆ ಲಭ್ಯತೆ ಅನುಸಾರ ಅವರು ಬಯಸುವ ಸ್ಥಳಗಳಿಗೆ ವರ್ಗಾವಣೆ ಮಾಡುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕೇತರ ಸಿಬಂದಿಯ ಮುಂಭಡ್ತಿ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು.
ಬೆಂಗಳೂರು ವಿಭಾಗದ ಮಾದರಿಯಲ್ಲಿ ಮೈಸೂರು ವಿಭಾಗದವರಿಗೂ ಪದೋನ್ನತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.