Advertisement

ಚಿಗುರಿದ ಶಿಕ್ಷಕರ ವರ್ಗಾವಣೆ ಕನಸು : ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ

09:55 AM Mar 12, 2020 | sudhir |

ಬೆಂಗಳೂರು: ಶಿಕ್ಷಕರ ವರ್ಗಾವಣೆ ಸಂಬಂಧ ಮಸೂದೆ ಮಂಡನೆಯಾಗಿದ್ದು, 50 ವರ್ಷ ಮೀರಿದ ಶಿಕ್ಷಕಿ ಮತ್ತು 55 ವರ್ಷ ಮೀರಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಯಿಂದ ವಿನಾಯಿತಿ ಕಲ್ಪಿಸಲಾಗಿದೆ. ವಿಶೇಷ ಚೇತನರಿಗೂ ಇದು ಅನ್ವಯ ಆಗಲಿದೆ.

Advertisement

ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಮಂಗಳವಾರ ಸದನದಲ್ಲಿ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಮಸೂದೆ-2020 ಮಂಡಿಸಿದ್ದು, ಚರ್ಚೆಯ ಬಳಿಕ ಸ್ಪಷ್ಟತೆ ಸಿಗಲಿದೆ.

ಮಸೂದೆಯಲ್ಲಿ ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ನೀಡುವ ಪ್ರಸ್ತಾವ ಇದೆ. ಗ್ರಾಮೀಣ ಭಾಗದಲ್ಲಿ 10 ವರ್ಷ ಸೇವೆ ಸಲ್ಲಿಸದ, ನಗರ ಪ್ರದೇಶದಲ್ಲಿ 10 ವರ್ಷ ನಿರಂತರ ಸೇವೆ ಸಲ್ಲಿಸಿರುವವರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆಗೆ ಸೇವಾ ಜ್ಯೇಷ್ಠತೆಯನ್ನು 3 ವರ್ಷಗಳಿಗೆ ಇಳಿಸಲಾಗಿದೆ.

ಶಿಕ್ಷಕ ಅಥವಾ ಶಿಕ್ಷಕಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕೊನೆಯ ಹಂತದ ಕಾಯಿಲೆ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂಗವಿಕಲ ಪ್ರಕರಣ, 12 ವರ್ಷ ಒಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ವಿಧುರ ಅಥವಾ ವಿಚ್ಛೇದಿತ ಶಿಕ್ಷಕ, ಗರ್ಭಿಣಿ ಅಥವಾ ಒಂದು ವರ್ಷದ ಮಗು ಹೊಂದಿರುವ ಶಿಕ್ಷಕಿಗೆ ಸೇವಾ ಅವಧಿಯಲ್ಲಿ ಒಮ್ಮೆ ವರ್ಗಾವಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಶೇ. 15ರ ಮಿತಿಯಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುವ ಪ್ರಸ್ತಾವವಿದೆ. ವಿನಾಯಿತಿ ವರ್ಗಾವಣೆ ಇದರ ವ್ಯಾಪ್ತಿಗೆ ಬರುವುದಿಲ್ಲ.

Advertisement

ಸಿ ವಲಯದಲ್ಲಿ (ಗ್ರಾಮೀಣ ಭಾಗ) 10 ವರ್ಷಗಳ ಸೇವೆಯನ್ನು ಸಲ್ಲಿಸದ ಮತ್ತು ಎ ವಲಯದಲ್ಲಿ (ನಗರ ಪ್ರದೇಶ) ನಿರಂತರವಾಗಿ ಹತ್ತು ವರ್ಷಗಳಿಗೂ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಶಿಕ್ಷಕರಿಗೆ ಬಿ ವಲಯ (ಪಟ್ಟಣ ಪ್ರದೇಶ) ಮತ್ತು ಸಿ ವಲಯ (ಗ್ರಾಮೀಣ ಭಾಗ)ಕ್ಕೆ ವರ್ಗಾವಣೆ ಮಾಡಬೇಕು ಎಂದು ತಿಳಿಸಲಾಗಿದೆ.

ಹೊಸ ಶಾಸನವು ಶಿಕ್ಷಕರ ಹಲವಾರು ಪ್ರವರ್ಗಗಳಿಗಾಗಿ ಎಲ್ಲ ವಿನಾಯಿತಿಗಳು ಮತ್ತು ಆದ್ಯತೆಗಳೊಂದಿಗೆ ಶಿಕ್ಷಕ ಸಂಪನ್ಮೂಲದ ವರ್ಗಾವಣೆ ಮತ್ತು ಸಮರ್ಪಕ ಮರು ಹಂಚಿಕೆ ಮಾಡುವ ವಿಷಯದಲ್ಲಿ ಶಿಕ್ಷಕ ಸ್ನೇಹಿಯಾಗಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಏನಿದೆ ಹೊಸತು?
– ಸೇವಾ ಜ್ಯೇಷ್ಠತೆ 5ರಿಂದ 3 ವರ್ಷಕ್ಕೆ ಇಳಿಕೆ
– ಶೇ. 15ರ ಮಿತಿಯಲ್ಲಿ ಕೌನ್ಸೆಲಿಂಗ್‌
– ನಗರ ಪ್ರದೇಶದಲ್ಲಿ 10 ವರ್ಷ ಸೇವೆ ಸಲ್ಲಿಸಿರುವವರಿಗೆ ಗ್ರಾಮೀಣ ಭಾಗಕ್ಕೆ ವರ್ಗ
– ಸಿ ಮತ್ತು ಬಿ ವಲಯದ ಶಾಲೆಗಳ ಶಿಕ್ಷಕರಿಗೆ ಎ ವಲಯದ ಶಾಲೆ ಆಯ್ಕೆ ಮಾಡಿಕೊಳ್ಳುವ ಅವಕಾಶ
– ನಿವೃತ್ತಿ ಅಂಚಿನಲ್ಲಿರುವವರಿಗೆ ವರ್ಗಾವಣೆ ವಿನಾಯಿತಿ

Advertisement

Udayavani is now on Telegram. Click here to join our channel and stay updated with the latest news.

Next