ಮೈಸೂರು: ಏಕಾಏಕಿ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಹಾಗೂ ವರ್ಗಾವಣೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿ ನೂರಾರು ಶಿಕ್ಷಕರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಗರದ ಮಹಾರಾಣಿ ಎನ್‌ಟಿಎಂಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಆಯೋಜಿಸಲಾಗಿತ್ತು. ಕೋರಿಕೆ ವರ್ಗಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು. ಆದರೆ ಏಕಾಏಕಿ ನಡೆಯುತ್ತಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಿಕ್ಷಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ಕೌನ್ಸೆಲಿಂಗ್ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂದಾಜು 10-11 ಶಿಕ್ಷಕರಿಗೆ ಅವರ ಕೋರಿಕೆ ಮೇರೆಗೆ ವರ್ಗಾವಣೆ ಆದೇಶವನ್ನು ನೀಡಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ “ಎ’ ವಲಯ(ನಗರ ಪ್ರದೇಶ)ದಲ್ಲಿ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದು, “ಸಿ’ ವಲಯ(ಗ್ರಾಮೀಣ ಪ್ರದೇಶ)ಕ್ಕೆ ಹೋಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ವರ್ಗಾವಣೆ ಆದೇಶವನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದ ಶಿಕ್ಷಕರು, ವರ್ಗಾವಣೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿದ್ದಲ್ಲದೆ, ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದರು.
ಇದರಿಂದಾಗಿ ಕೌನ್ಸೆಲಿಂಗ್ ನಡೆಯುತ್ತಿದ್ದ ಎನ್‌ಟಿಎಂಎಸ್ ಶಾಲೆಯ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಡಿಡಿಪಿಐ ಮಮತಾ ಮಾತನಾಡಿ, ಅಧಿಕಾರಿಗಳು ಶಿಕ್ಷಣ ಇಲಾಖೆ ಕಾರ್ಯದರ್ಶಿ ಆದೇಶದ ಮೇರೆಗೆ ವರ್ಗಾವಣೆ ನಿಲ್ಲಿಸಿದ್ದು, ಯಾವ ಕಾರಣಕ್ಕೆ ವರ್ಗಾವಣೆ ನಿಲ್ಲಿಸಿದ್ದಾರೆ ಎಂಬುದು ತಿಳಿದಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೂ ಕೌನ್ಸೆಲಿಂಗ್ ಮಾಡುವುದಿಲ್ಲ. ಶಿಕ್ಷಕರು ಲಿಖೀತ ರೂಪದಲ್ಲಿ ದೂರು ನೀಡಿದರೆ ಇಲಾಖೆ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ನಗರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಶಿಕ್ಷಕರ ಕೋರಿಕೆ ಕೌನ್ಸೆಲಿಂಗ್ ಪ್ರಕ್ರಿಯೆ ಮೊದಲ ದಿನದಂದು ತಾಂತ್ರಿಕ ಕಾರಣದಿಂದ ನಡೆಯಲಿಲ್ಲ. ಹೀಗಾಗಿ 400ಕ್ಕೂ ಹೆಚ್ಚು ಶಿಕ್ಷಕರು ಭಾನುವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು. ಆದರೆ ಏಕಾಏಕಿ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಕೌನ್ಸೆಲಿಂಗ್ ವೇಳೆ ನೀಡಿರುವ ವರ್ಗಾವಣೆ ಆದೇಶ ಹಿಂದಿರುಗಿಸುವಂತೆ ಹೇಳಿರುವುದು ಗೊಂದಲ ಮೂಡಿಸಿದೆ.
-ಕುಮಾರ್, ಶಿಕ್ಷಕ.