Advertisement

ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಇಲ್ಲದ ಶಿಕ್ಷಕರು!

10:35 AM Oct 15, 2017 | Team Udayavani |

ಬೆಂಗಳೂರು: ವೃತ್ತಿ ತರಬೇತಿ ಇಲ್ಲದ ಎರಡು ಸಾವಿರಕ್ಕೂ ಅಧಿಕ ಶಿಕ್ಷಕರು ಇನ್ನೂ ಶಿಕ್ಷಣ ಇಲಾಖೆಯಲ್ಲಿ ಇದ್ದಾರೆ!

Advertisement

ಹೌದು, ರಾಜ್ಯದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ 2 ಸಾವಿರಕ್ಕೂ ಅಧಿಕ ಶಿಕ್ಷಕರಲ್ಲಿ ವೃತ್ತಿ ತರಬೇತಿ ಇಲ್ಲ ಎಂಬುದು ಶಿಕ್ಷಣ ಇಲಾಖೆಯೇ ದೃಢಪಡಿಸಿದೆ.

ಶಿಕ್ಷಣ ಇಲಾಖೆಯಿಂದ ವೃತ್ತಿ ತರಬೇತಿ ಇಲ್ಲದ ಶಿಕ್ಷಕರನ್ನು ಗುರುತಿಸಲಾಗುತ್ತಿದೆ. ಹೈದರಾಬಾದ್‌ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಇಒಗಳ ಮೂಲಕ ವೃತ್ತಿತರಬೇತಿ ಇಲ್ಲದ ಶಿಕ್ಷಕರನ್ನು ಪಟ್ಟಿ ಮಾಡಲಾಗುತ್ತಿದೆ. ಇಲಾಖೆಯಿಂದ ಈಗಾಗಲೇ ಕಲೆ ಹಾಕಿರುವ ಮಾಹಿತಿ ಪ್ರಕಾರ 2 ಸಾವಿರಕ್ಕೂ ಅಧಿಕ ಶಿಕ್ಷಕರು ವೃತ್ತಿ ತರಬೇತಿ ಹೊಂದಿಲ್ಲ ಎಂಬುದು ಖಚಿತವಾಗಿದೆ.

ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಹತ್ತಾರು ನೀತಿ ನಿಯಮ ರೂಪಿಸುತ್ತದೆ. ಪದವಿ ಸಹಿತ ಬಿ.ಇಡಿ ಕೋರ್ಸ್‌ ಪೂರೈಸಿರಬೇಕು. ಸಂಬಂಧಪಟ್ಟ ವಿಷಯದಲ್ಲೇ ಬಿ.ಇಡಿ ಮುಗಿಸಿ ಬೇಕು. ಸ್ನಾತಕೋತ್ತರ ಪದವಿ ಪಡೆದವರಿಗೆ ಮೊದಲ ಆದ್ಯತೆ ಎಂಬಿತ್ಯಾದಿ ಹಲವು ಷರತ್ತು ವಿಧಿಸಲಾಗುತ್ತದೆ. ಆದರೆ, ಪ್ರತಿ ತಿಂಗಳು ಸರ್ಕಾರಿ
ಸಂಬಳದ ಜತೆಗೆ ಸಕಲ ಸೌಲಭ್ಯವನ್ನೂ ಪಡೆಯುವ ಶಿಕ್ಷಕರಿಗೆ ವೃತ್ತಿ ತರಬೇತಿಯೇ ಇಲ್ಲ ಎಂದಾದರೆ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿತಿ ಹೇಗಿರಬಹುದು ಎಂಬುದನ್ನು ಸುಲಭವಾಗಿ ಯೋಚಿಸಬಹುದು. ಇತ್ತೀಚಿನ ವರ್ಷದಲ್ಲಿ ಶಿಕ್ಷಕರ ನೇಮಕಾತಿಗೆ ಕೆಲವೊಂದು ಕಠಿಣ ನಿಯಮ ರೂಪಿಸಲಾಗಿದೆ. 

ಬಿ.ಇಡಿ ಜತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂಬುದನ್ನು ಕಡ್ಡಾಯ ಮಾಡಿದೆ.

Advertisement

ಅನ್‌ಟ್ರೈನ್‌ ಟೀಚರ್‌: ಸಾರ್ವಜನಿಕ ಶಿಕ್ಷಣ
ಇಲಾಖೆಯಿಂದ ಕೆಲವು ಮಾನದಂಡ ಆಧಾರದಲ್ಲಿ ವೃತ್ತಿ ತರಬೇತಿ ಇಲ್ಲದ ಶಿಕ್ಷಕರನ್ನು ಗುರುತಿಸಲಾಗುತ್ತಿದೆ. ಮಕ್ಕಳ ಮಾನಸಿಕತೆಯನ್ನು ಅರ್ಥಮಾಡಿ ಕೊಂಡು ಬೋಧನೆ ಮಾಡದೇ ಇರುವುದು, ಇಲಾಖೆಯಿಂದ ನೀಡಿರುವ ಪಠ್ಯಕ್ರಮವನ್ನು
ಪರಿಣಾಮಕಾರಿಯಾಗಿ ಬೋಧಿಸದೇ ಇರುವುದು, ಶಿಕ್ಷಣ ಇಲಾಖೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಅನುಷ್ಠಾನದಲ್ಲಿ ಸೋಲುತ್ತಿರುವವರು ಹೀಗೆ ಬೋಧನಾ ವಿಧಾನವನ್ನು ಸುಧಾರಿಸಿಕೊಳ್ಳದ,ಶೈಕ್ಷಣಿಕವಾಗಿ ಉನ್ನತೀಕರಿಸಿಕೊಳ್ಳದ ಶಿಕ್ಷಕರನ್ನು ವೃತ್ತಿ ತರಬೇತಿ ಇಲ್ಲದ ಶಿಕ್ಷಕರೆಂದು ಗುರುತಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೃತ್ತಿ ತರಬೇತಿ ಇಲ್ಲದ ಶಿಕ್ಷಕರ ಪೈಕಿ ಜಿಲ್ಲಾ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳ ಮೂಲಕ ನೇಮಕವಾದ ಶಿಕ್ಷಕರು ಹೆಚ್ಚಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂತಹ ಶಿಕ್ಷಕರು ಹೆಚ್ಚಿದ್ದಾರೆ.

ರಾಜ್ಯದ 2016-17ರ ಡೈಸ್‌ ವರದಿ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 42,117 ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1,24,019 ಶಿಕ್ಷಕರು ಹಾಗೂ ಪ್ರೌಢಶಾಲೆಯಲ್ಲಿ 46,704 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ವೃತ್ತಿ ತರಬೇತಿ ಪಡೆಯದ ಶಿಕ್ಷಕರೂ ಇದ್ದಾರೆ.

ವಿದ್ಯಾರ್ಥಿಗಳ ಮಾನಸಿಕತೆಯನ್ನು ಅರಿತು ಬೋಧಿಸಲು ಸಾಧ್ಯವಾಗದ ಶಿಕ್ಷಕರನ್ನು ವೃತ್ತಿ ತರಬೇತಿ ಇಲ್ಲದ ಶಿಕ್ಷಕರೆಂದು ಪಟ್ಟಿ ಮಾಡಲಾಗಿದೆ. ಶಿಕ್ಷಕರ ಶಿಕ್ಷಣದ ತರಬೇತಿಯ ಜತೆಗೆ ಇಲಾಖೆಯಿಂದಲೂ ತರಬೇತಿ ನೀಡಲಾಗುತ್ತದೆ.ಸರ್ಕಾರಿ ಶಾಲಾ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಉದ್ದೇಶದಿಂದ ಈ ಮಾಹಿತಿ ಸಂಗ್ರಹಿಸುತ್ತಿದ್ದೇವೆ.
– ಬಿ.ಕೆ.ಬಸವರಾಜು, ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next