Advertisement

ವರ್ಗಾವಣೆ ಪತ್ರ ನೀಡಲು ಶಿಕ್ಷಕರ ಪರದಾಟ

12:56 PM Jul 29, 2019 | keerthan |

ಕೋಟ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ವಿವರ ನೋಂದಾವಣೆಗೆ ಶಿಕ್ಷಣ ಇಲಾಖೆಯು ಎಸ್‌ಎಟಿಎಸ್‌ ಸಾಫ್ಟ್ವೇರ್‌ ಅಳವಡಿಸಿದೆ. ವರ್ಗಾವಣೆ ಪತ್ರವನ್ನೂ ಇದರ ಮೂಲಕ ನೀಡುವುದು ಕಡ್ಡಾಯ. ಆದರೆ ಸರ್ವರ್‌ ಸಮಸ್ಯೆಯಿಂದ ವೆಬ್‌ಸೈಟ್‌ ಸರಿಯಾಗಿ ಕಾರ್ಯನಿರ್ವಹಿಸದೆ ರಾಜ್ಯಾದ್ಯಂತ ಶಿಕ್ಷಕರು ಪರದಾಡುತ್ತಿದ್ದಾರೆ.

Advertisement

ಹಿಂದೆ ಶಾಲಾ ವಿದ್ಯಾರ್ಥಿಗಳು ಬೇರೆ
ಶಾಲೆ ಸೇರಬೇಕಾದರೆ ಕೈಬರಹದ ವರ್ಗಾ ವಣೆ ಪತ್ರ ನೀಡಲಾಗುತ್ತಿತ್ತು. ಆದರೆ ಈಗ ಕೈಬರಹದ ಟಿಸಿ ಮೂಲಕ ತಾತ್ಕಾಲಿಕವಾಗಿ ಸೇರ್ಪಡೆಗೊಳಿಸಲಾಗುತ್ತದೆ, ಅನಂತರ ಸಾಫ್ಟ್ ವೇರ್‌ ಮೂಲಕವೇ ವರ್ಗಾವಣೆ ಪತ್ರ ನೀಡಿ ದಾಖಲಾತಿ ಅಧಿಕೃತಗೊಳಿಸಬೇಕು. ಶಾಲೆ ಆರಂಭ ಗೊಂಡ 2 ತಿಂಗಳಾದರೂ ತಂತ್ರಾಂಶ ಸಮಸ್ಯೆಯಿಂದ ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ.

ಶಿಕ್ಷಕರ ಪರದಾಟ
ಶಿಕ್ಷಕರು ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತರೂ ಒಬ್ಬ ವಿದ್ಯಾರ್ಥಿಯ ಮಾಹಿತಿಯನ್ನೂ ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಕಂಪ್ಯೂಟರ್‌ ಶಿಕ್ಷಕರಿಲ್ಲದ ಮತ್ತು ಗ್ರಾಮಾಂತರ ಭಾಗದ ಶಾಲೆಗಳಲ್ಲಿ ಬಹಳ ಸಮಸ್ಯೆಯಾಗುತ್ತಿದೆ. ಅನೇಕ ವಿದ್ಯಾರ್ಥಿಗಳ ಪ್ರವೇಶ ತಾತ್ಕಾಲಿಕ ಸ್ಥಿತಿಯಲ್ಲಿಯೇ ಇದೆ.

ರಜಾ ದಿನ ಕಂಪ್ಯೂಟರ್‌ ಮುಂದೆ
ರಾಜ್ಯಾದ್ಯಂತ ಒಂದೇ ಸಾಫ್ಟ್ವೇರ್‌ ಆಗಿರುವುದರಿಂದ ಈ ಸಮಸ್ಯೆಯಾಗಿದೆ. ರಜಾ ದಿನಗಳಲ್ಲಿ, ಶನಿವಾರ, ರವಿವಾರ ಮತ್ತು ಬೆಳಗ್ಗೆ ಶಾಲೆ ಆರಂಭವಾಗುವುದಕ್ಕೆ ಮುನ್ನ ಸಾಫ್ಟ್ವೇರ್‌ ಕೊಂಚ ವೇಗವಾಗಿರುತ್ತದೆ. ಹೀಗಾಗಿ ಶಿಕ್ಷಕರು ಈ ಸಂದರ್ಭಗಳಲ್ಲಿ ಸೈಬರ್‌ಗಳಿಗೆ ಎಡತಾಕುತ್ತಿದ್ದಾರೆ.

ಎಲ್ಲದಕ್ಕೂ ಸಮಸ್ಯೆ
ಈಗ ಟಿಸಿ ನೀಡಲು ಸಮಸ್ಯೆ ಎದುರಾಗಿದೆ. ಆದರೆ ಇಷ್ಟಕ್ಕೆ ಸೀಮಿತವಾಗದೆ ಅಂಕ, ಹಾಜರಾತಿ, ಸ್ಕಾಲರ್‌ಶಿಪ್‌ ಹೀಗೆ ಹಲವಾರು ಮಾಹಿತಿಗಳನ್ನು ದಾಖಲಿಸುವಾಗಲೂ ಇದೇ ರೀತಿ ಅಡಚಣೆ ಎದುರಾಗುತ್ತದೆ. ಸಾಕಷ್ಟು ಸಮಯದಿಂದ ಈ ಸಮಸ್ಯೆ ಇದೆ.

Advertisement

ಏನಿದು ಎಸ್‌ಎಟಿಎಸ್‌ ಸಾಫ್ಟ್ವೇರ್‌?
ಮಕ್ಕಳ ಹಾಜರಿ ಪ್ರಮಾಣ, ಅಂಕ, ವರ್ಗಾವಣೆ ಪತ್ರ, ಕ್ರೀಡಾ ಪಾಲ್ಗೊಳ್ಳುವಿಕೆ, ಅಭ್ಯಾಸ ಮಟ್ಟ, ಜನ್ಮದಿನಾಂಕ ದಾಖಲೆ, ಜಾತಿ, ಕೆಟಗರಿ ಪ್ರಮಾಣ ಪತ್ರಗಳಂತಹ ಹಲವು ಮಾಹಿತಿಗಳನ್ನು ಇದರಲ್ಲಿ ದಾಖಲಿಸಲಾಗುತ್ತದೆ. ಎಲ್ಲ ಇಲಾಖೆಗಳೊಂದಿಗೆ ವಿದ್ಯಾರ್ಥಿಯ ಮಾಹಿತಿ ಹಂಚಿಕೊಳ್ಳುವುದರಿಂದ ಸ್ಕಾಲರ್‌ಶಿಪ್‌ ಇತ್ಯಾದಿ ಸೌಲಭ್ಯ ಪಡೆಯಲು ಅನುಕೂಲ. ಶಿಕ್ಷಣ ಇಲಾಖೆಯ ಅಧಿ ಕಾರಿಗಳು, ಶಿಕ್ಷಕರಿಗೆ ಲಾಗ್‌ಇನ್‌ ಐಡಿ ಇದೆ. ಅವರು ಇದನ್ನು ಬಳಸಿ ವಿದ್ಯಾರ್ಥಿಯ ವಿವರ ಪಡೆಯಬಹುದು.

ರಜಾದಿನಗಳಲ್ಲಿ ಪ್ರಯತ್ನಿಸಿ
ರಾಜ್ಯಾದ್ಯಂತ ಒಂದೇ ಸಾಫ್ಟ್ವೇರ್‌ ಕಾರ್ಯನಿರ್ವಹಿಸುವುದರಿಂದ ಈ ಸಮಸ್ಯೆಯಾಗಿದೆ. ರಜಾದಿನ ಮತ್ತು ಬೆಳಗ್ಗೆ ಶಾಲೆ ಆರಂಭಕ್ಕೂ ಮುನ್ನ ಅದು ವೇಗವಾಗಿರುತ್ತದೆ. ಆಗ ಕಾರ್ಯನಿರ್ವಹಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಮೊಬೈಲ್‌ ಮೂಲಕವೂ ಉಪಯೋಗಿಸಬಹುದು.
ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

ರಾಜೇಶ್‌ ಗಾಣಿಗ ಅಚ್ಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next