ಮನುಷ್ಯನ ಪ್ರಾಣ ಇರುವವರೆಗೆ ಏನೋ ಒಂದು ಆಶಾಭಾವನೆ ಇರುತ್ತದೆ. ಪ್ರಾಣ ಹೋದ ಬಳಿಕ ಇನ್ನು ಮರಳಿ ಬರುವುದಿಲ್ಲ ಎನ್ನುವಾಗ ದುಃಖ ಉಮ್ಮಳಿಸುತ್ತದೆ. ಮರಣ ಅಂದರೆ ಮುಖ್ಯಪ್ರಾಣ ದೇವರು ನಿರ್ಗಮಿಸುವುದು. ಬೇರೆ ಯಾವುದೇ ಅಂಗಗಳು ವಿಫಲವಾದರೆ ಮರಣ ಎನ್ನುವುದಿಲ್ಲ. ಅಸು = ಮುಖ್ಯಪ್ರಾಣ.
ಪ್ರಾಣಾಪಾನವ್ಯಾನೋದಾನಸಮಾನ ಈ ಐದು(ಪಂಚ)ಪ್ರಾಣಗಳು ಹೋದ ಬಳಿಕವೇ ಮರಣ ಎನ್ನುವುದು. ಐದು ಪ್ರಾಣ ಇರುವುದರಿಂದಲೇ ಮುಖ್ಯಪ್ರಾಣ ದೇವ”ರು’ ಎಂದು ಬಹುವಚನ ಬಳಸುವುದು. ಸತ್ತವರನ್ನು, ಸಾಯುವವರನ್ನು ಕಂಡು ಪಂಡಿತರಿಗೆ ದುಃಖವಾಗುವುದಿಲ್ಲವೇಕೆಂದರೆ ಎಲ್ಲರಿಗೂ ಆಗುವಂಥದ್ದು ಎಂದು ತಿಳಿದದ್ದರಿಂದ. ಎಲ್ಲರಿಗೂ ಮರಣವಿದೆ ಎಂದು ತಿಳಿಯುವುದರಿಂದ ಪಂಡಿತರಿಗೆ ದುಃಖ ಆಗುವುದಿಲ್ಲ. ಅವಮಾನ ಆಗುವಾಗ ಎಲ್ಲರೂ ಒಂದಾಗುವುದನ್ನು ನೋಡಿದರೆ ಇದರ ಮರ್ಮ ತಿಳಿಯುತ್ತದೆ.
ಕಠೊಪನಿಷತ್ತಿನ ಪ್ರತಿಪಾದನೆಯನ್ನೇ ಇಲ್ಲಿ ಶ್ರೀಕೃಷ್ಣ ಪಡಿಮೂಡಿಸಿದ್ದಾನೆ. ಕಷ್ಟ ಎಲ್ಲರಿಗೂ ಇದೆ ಎಂದು ತಿಳಿಯಬೇಕು. ನನಗೆ ಮಾತ್ರ ಕಷ್ಟ ಎಂದು ತಿಳಿದರೆ ಮಾತ್ರ ದುಃಖವಾಗುವುದು. ಶೋಕಕ್ಕೂ, ದುಃಖಕ್ಕೂ ವ್ಯತ್ಯಾಸವಿದೆ. “ಪುತ್ರ ಶೋಕಂ ನಿರಂತರಂ’- ಇಲ್ಲಿ “ಪುತ್ರ ದುಃಖಂ ನಿರಂತರಂ’ ಎನ್ನಲಿಲ್ಲ. ಸ್ಮರಣೆಗೆ ಬಂದ ತತ್ಕ್ಷಣ ಬರುತ್ತಿರುವುದು ಶೋಕ. ದುಃಖವೆಂದರೆ ಒಂದು ಬಾರಿ ಬಂದು ಹೋಗುವುದು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811