ಬೆಳಗಾವಿ: ರಾಜ್ಯ ಸರಕಾರಿ ನೌಕರ ಸಂಘದ ಏಳ್ಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಪಾರದರ್ಶಕ, ಶಿಕ್ಷಕ ಸ್ನೇಹಿಯಾಗಿ ಕ್ರಿಯಾಶೀಲವಾಗಿ ಸಂಸ್ಥೆ ಮುನ್ನಡೆಯುತ್ತಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಬೆಳಗಾವಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ವತಿಯಿಂದ ನಡೆದ ನಿವೃತ್ತ ಸದಸ್ಯ ಶಿಕ್ಷಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಮಾದರಿಯಾಗಿರುವ ಸಂಸ್ಥೆ ಬೆಳಗಾವಿಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಶಿಕ್ಷಕರಿಗೆ ಆರ್ಥಿಕವಾಗಿ ಬಲ ನೀಡಿ ಉತ್ತಮ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.
ರಾಜ್ಯ ಸರಕಾರವು ನೌಕರರಿಗೆ ಕೇಂದ್ರ ಸರಕಾರದ ಮಾದರಿ ವೇತನ ಶ್ರೇಣಿ ಜಾರಿಗೊಳಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಎನ್‌ಪಿಎಸ್ ಯೋಜನೆ ಕೈಬಿಟ್ಟು ಓಪಿಎಸ್ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ನೌಕರರಿಗೆ ಆರೋಗ್ಯ ಸಂಜೀವಿನಿ ಜಾರಿಗೊಳಿಸಲು ಬದ್ದವಾಗಿದ್ದೇವೆ. ತಮ್ಮ ಎರಡು ವರ್ಷದ ಅವಧಿಯಲ್ಲಿ ನೌಕರರ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇನ್ನುಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಡಯಟ್ ಪ್ರಾಚಾರ್ಯ ಎಂ.ಎಂ ಸಿಂದೂರ ಮಾತನಾಡಿ, ಶಿಕ್ಷಕರ ಪ್ರತಿಭೆಯನ್ನು ಗುರುತಿಸಿ ಸತ್ಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿವೃತ್ತ ಶಿಕ್ಷಕರು ಮತ್ತು ಸದಸ್ಯ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಬೆಳಗಾವಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಶೇಖರ್ ಕರಂಬಳಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್ ತಿಮ್ಮೆಗೌಡ, ಆರ್.ಶ್ರೀನಿವಾಸ್, ಮಲ್ಲಿಕಾರ್ಜುನ್ ಬಳ್ಳಾರಿ, ಬಿ.ಎಚ್. ವೆಂಕಟೇಶಯ್ಯ, ಬೆಳಗಾವಿ ಗ್ರಾಮೀಣ ಬಿಇಓ ಆರ್, ಪಿ ಜುಟ್ಟನವರ, ಬಸವರಾಜ ರಾಯಪ್ಪಗೋಳ, ಮೀನಾಕ್ಷಿ ಕುಡಿಸೋಮಣ್ಣವರ್, ಶಂಕರ್ ಗೋಕಾವಿ, ಎಸ್.ಡಿ.ಗಂಗಣ್ಣವರ ಬೆಳಗಾವಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ ಸಂಘದ ಅಧ್ಯಕ್ಷ ಅನ್ವರ್ ಲಂಗೋಟಿ, ಉಪಾಧ್ಯಕ್ಷೆ ರೇವಾಣಿ ಮೋದಗೇಕರ ಉಪಸ್ಥಿತರಿದ್ದರು. ಎ.ಎಚ್.ಲಂಗೋಟಿ ಸ್ವಾಗತಿಸಿದರು. ಎ.ಜಿ.ಮುಲ್ಲಾ, ಎಂ ಚೌಗಲೆ ನಿರೂಪಿಸಿದರು.ಎ.ಬಿ.ಮಡಿವಾಳರ ವಂದಿಸಿದರು.