Advertisement
ಎಸ್‌ಎಸ್‌ಎಲ್‌ಸಿ ಬೋಧಕರಿಗೆ “ಉದಯವಾಣಿ’ ಕೆಲವೊಂದಿಷ್ಟು ಪ್ರಶ್ನೆಗಳನ್ನು ಇಟ್ಟಿತ್ತು. ಇನ್ನುಳಿದ ಐದಾರು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಲು ಸಾಧ್ಯವೆ, ಪಠ್ಯ ಕಡಿತ ಎಷ್ಟಾಗಬೇಕು, ಪರೀಕ್ಷೆಗೆ ಬೇಕಾದ ಸಿದ್ಧತೆಗಳು, ಶೈಕ್ಷ ಣಿಕ ವರ್ಷದ ವಿಸ್ತರಣೆ ಇತ್ಯಾದಿ ಬಗ್ಗೆ ಮಾಹಿತಿ ಅಪೇಕ್ಷಿಸಿದ್ದು, ಶಿಕ್ಷಕರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಶೇ.30 ರಿಂದ ಶೇ.50ರವರೆಗೆ ಪಠ್ಯ ಕಡಿತ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಅಗತ್ಯ ಬದಲಾವಣೆ, ಸರಳೀಕರಣದ ಬಗ್ಗೆ ಶಿಕ್ಷಕರು ಒಲವು ತೋರಿದ್ದಾರೆ. ಬಹುತೇಕರು ಶೈಕ್ಷಣಿಕ ವರ್ಷ ವಿಸ್ತರಣೆ ಬೇಡ ಎಂದಿದ್ದಾರೆ.
Related Articles
Advertisement
ಪಠ್ಯ ಕ್ರಮ ಕಡಿತ ಮಾಡುವುದಾದರೆ, ಇಡೀ ಪಾಠವನ್ನು ಕಡಿತಗೊಳಿಸಬೇಕು. ಈಗಲೇ ಈ ಬಗ್ಗೆ ಶಿಕ್ಷಕರಿಗೆ ಮಾಹಿತಿ ದೊರೆಯಬೇಕು. ನಾಲ್ಕು ಪುಟಗಳ ಪಾಠದಲ್ಲಿ 2 ಪುಟ ಬೋಧನೆ ಮಾಡಿ ಎನ್ನುವುದು ಸರಿಯಲ್ಲ. ವಾರ್ಷಿಕ ಪರೀಕ್ಷಾ ಪತ್ರಿಕೆಯಲ್ಲಿ 4-5 ಅಂಕಗಳ ಪ್ರಶ್ನೆಗಳು ಬೇಡವೇ ಬೇಡ, ಮಕ್ಕಳ ಅಷ್ಟೆಲ್ಲ ಅಧ್ಯಯನ ಮಾಡಲು ಸಮಯವಿಲ್ಲ. ಬಹು ಆಯ್ಕೆಯ ಪ್ರಶ್ನೆ, ಸಂಕ್ಷಿಪ್ತ ಉತ್ತರದ ಪ್ರಶ್ನೆಗಳಿಗೆ ಆದ್ಯತೆ ಕೊಡಬೇಕು. –ಸಿ.ವಿ.ಜಯಣ್ಣ, ಸಹ ಶಿಕ್ಷಕ (ಹಿರಿಯ), ಶೈಕ್ಷಣಿಕ ಪುಸ್ತಕಗಳ ಲೇಖಕರು, ರಾಮನಗರ ಟೌನ್
ಪಠ್ಯ ಕ್ರಮದಲ್ಲಿ ಕನಿಷ್ಠ ಶೇ.30 ರಷ್ಟು ಕಡಿತಗೊಳಿಸಿದರೆ, ಇನ್ನುಳಿದ ತಿಂಗಳುಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಲು ಸಾಧ್ಯವಿದೆ. ಶೈಕ್ಷಣಿಕ ವರ್ಷವನ್ನು 2 ತಿಂಗಳ ಕಾಲ ವಿಸ್ತರಣೆ ಮಾಡಿದರೆ ಬೋಧನೆಗೆ ಸಹಕಾರಿ. –ಶೈಲ ಶ್ರೀನಿವಾಸ್, ಮು.ಶಿ., ಕೈಲಾಂಚ ಪ್ರೌಢಶಾಲೆ, ರಾಮನಗರ
ಪಠ್ಯಕ್ರಮವನ್ನು ಶೇ.40- 50ಕ್ಕೆ ಕಡಿತವಾಗಬೇಕು. ಇಲ್ಲದಿದ್ದರೆ, ಮಕ್ಕಳ ಮೇಲೆ ಹೊರೆ ಖಂಡಿತ. ಶೈಕ್ಷಣಿಕ ವರ್ಷವನ್ನು ವಿಸ್ತರಣೆ ಮಾಡುವ ಅವಶ್ಯಕತೆ ಇಲ್ಲ. ಮಾಡಿದರೆ, ಇನ್ನೊಂದು ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗಲಿದೆ. ಮಕ್ಕಳನ್ನು ಪರೀಕ್ಷೆಗೆ ತಯಾರಿಗೊಳಿಸಲು ಶಿಕ್ಷಕರು ಸಿದ್ಧರಿದ್ದೇವೆ. –ಆರ್.ಸಿ. ಹೊನ್ನಗಂಗಪ್ಪ, ಮು.ಶಿ, ಗಾಣಕಲ್ ಪ್ರೌಢಶಾಲೆ, ರಾಮನಗರ