ಕಲಬುರಗಿ: ಸಮಾಜ ಕಲ್ಯಾಣ ಇಲಾಖೆ ಯೋಜನೆ ಹಣ ಹಾಗೂ ಲಾಭದಾಯಕ ಹುದ್ದೆ ಅನುಭವಿಸಿ ಸರಕಾರದ ಹಣ ಲೂಟಿ ಮಾಡುತ್ತಿರುವ ಶಿಕ್ಷಕನೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಜಿಪಂ ಕಚೇರಿ ಎದುರು ನಿವೃತ್ತ ಶಿಕ್ಷಕನೊಬ್ಬ ಕುಟುಂಬ ಸಮೇತ ಧರಣಿ ನಡೆಸುತ್ತಿದ್ದಾರೆ. ಪುತ್ರಿ ಸುಹಾಸಿನಿ ಬಂಡೆ, ಪತ್ನಿ ಕಾವೇರಿ ಬಂಡೆ ಸಮೇತ ನಿವೃತ್ತ ಶಿಕ್ಷಕ ಶಿವಯೋಗಿ ನಿಂಗಪ್ಪ ಬಂಡೆ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಶಿವಾಜಿ ನಗರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಹಣಮಂತ ಭೂತಪುರ ಎನ್ನುವವರು ಏಕ ಕಾಲಕ್ಕೆ ಖಾಸಗಿ ಸಂಸ್ಥೆಯಲ್ಲಿ ಅನುದಾನಿತ ಶಿಕ್ಷಕನಾಗಿ, 1987ರಿಂದ 2011ರವರೆಗೆ ಮತ್ತೂಂದು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ, 2004ರಿಂದ 2011ರವರೆಗೆ ಅದೇ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ, ಟ್ರಸ್ಟ್ ಒಂದರ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.
ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೋಟ್ಯಂತರ ರೂ.ಗಳ ಶಿಷ್ಯವೇತನ ಲಪಟಾಯಿಸಿದ್ದಾರೆ. ಈ ಕುರಿತು ಕ್ರಿಮಿನಲ್ ಪ್ರಕರಣವು ದಾಖಲಾಗಿದೆ. ಹಾಗಿದ್ದರೂ ಇನ್ನೂವರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಾನು ಈ ಕುರಿತು 6 ಬಾರಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದರೂ, ಸಂಪೂರ್ಣ ವಿವರವಾದ ಮನವಿ ನೀಡಿದರೂ, ಪ್ರತಿ ಬಾರಿ ಭೇಟಿ ಮಾಡಿ ನ್ಯಾಯ ಕೇಳಿದಾಗಲೂ ಕಡತ ತರಿಸಿ ನೋಡ್ತೇನೆ ಎನ್ನುತ್ತಾರೆ. ನಾನು ದೂರಿರುವ ಎಲ್ಲ ಅಕ್ರಮಗಳಿಗೆ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹಂತದಲ್ಲಿ ತನಿಖೆ ನಡೆದಿದೆ. ಈ ವೇಳೆಯಲ್ಲಿ ವರದಿಗಳನ್ನು ಸಿದ್ಧ ಮಾಡಿದ್ದಾರೆ.
ಅವೆಲ್ಲವೂ ಈ ಅಕ್ರಮಗಳು ನಡೆದಿವೆ ಎನ್ನುತ್ತಿರುವಾಗ ಜಿಪಂ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರು ಮಾತ್ರವೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಿವಯೋಗಿ ದೂರಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾನು ಹಾಗೂ ನನ್ನ ಮಗಳು ಮತ್ತು ಪತ್ನಿ ಈ ಕಚೇರಿ ಮುಂದಿನ ಧರಣಿ ಹಿಂಪಡೆಯುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.