Advertisement

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಶಿಕ್ಷಕರೇ ನೇರ ಹೊಣೆ: ವಿನೋತ್‌ ಪ್ರಿಯಾ

05:33 PM Dec 20, 2018 | Team Udayavani |

ಚಿತ್ರದುರ್ಗ: ಶಿಕ್ಷಕರು, ಮುಖ್ಯೋಪಾಧ್ಯಾಯರು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿರಾಶದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಮುಖ್ಯೋಪಾಧ್ಯಾಯರನ್ನು ತರಾಟೆಗೆ
ತೆಗೆದುಕೊಂಡರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗಾಗಿ ಬುಧವಾರ ನಡೆದ ಫಲಿತಾಂಶ ವಿಶ್ಲೇಷಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಇಂದು ಸಭೆ ಇರುವುದು ಗೊತ್ತಿದ್ದರೂ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದೀರಿ, ಇಂತಹ ಶಿಕ್ಷಕರನ್ನು ನೋಡಿದ ಮೇಲೆ
ಮಕ್ಕಳನ್ನು ನೋಡುವ ಅಗತ್ಯವೇ ಇಲ್ಲ. ಫಲಿತಾಂಶ ಕಡಿಮೆಯಾದರೆ ಶಿಕ್ಷಕರೇ ನೇರ ಹೊಣೆ. ಮುಖ್ಯೋಪಾಧ್ಯಾಯರೇ ಈ ರೀತಿಯಾದರೆ ಇನ್ನು ಶಿಕ್ಷಕರು, ಮಕ್ಕಳು ಹೇಗಿರುತ್ತಾರೆಂದು ಊಹಿಸಬಹುದು. ನೀವು ಯಾವ ಲೆವೆಲ್‌ ಇದ್ದೀರೋ ಅದೇ ಲೆವೆಲ್‌ನಲ್ಲಿ ಮಕ್ಕಳಿರುತ್ತಾರೆ. ಶಿಕ್ಷಕರೇ ಸರಿಯಿಲ್ಲದಿದ್ದರೆ ಮಕ್ಕಳು ಹೇಗೆ ಓದುತ್ತಾರೆ ಎಂದು ಗರಂ ಆದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯಲ್ಲಿ ಶೇ. 40ಕ್ಕಿಂತ
ಕಡಿಮೆ ಫಲಿತಾಂಶ ಬರುವುದು ಶಿಕ್ಷಕರಿಗೆ ಶೋಭೆ ತರುವಂಥದ್ದಲ್ಲ. ಉತ್ತಮ ಅರ್ಹತೆ ಹೊಂದಿರುವ ಶಿಕ್ಷಕರಿದ್ದೂ ಕಳಪೆ ಫಲಿತಾಂಶ ಬಂದರೆ ಯಾರನ್ನು ದೂರಬೇಕು, ಕಡಿಮೆ ಫಲಿತಾಂಶಕ್ಕೆ ಶಿಕ್ಷಕರೇ ಸಮಸ್ಯೆಯೋ, ವಿದ್ಯಾರ್ಥಿಗಳೇ ಸಮಸ್ಯೆಯೋ ತಿಳಿಯುತ್ತಿಲ್ಲ. ಸರ್ಕಾರ ಎಲ್ಲ ರೀತಿಯ ಅನುದಾನ, ಯೋಜನೆಗಳನ್ನು ನೀಡುತ್ತಿದ್ದರೂ ನಿರೀಕ್ಷಿತ
ಫಲಿತಾಂಶ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ಹಿನ್ನಡೆಗೆ ಕೆಲ ಶಾಲೆಗಳ ಮುಖ್ಯೋಪಾಧ್ಯಾಯರು ತರಗತಿಗೆ ಹೋಗದಿರುವ ದೂರುಗಳಿವೆ. ಶಿಕ್ಷಕರು ಸರಿಯಾಗಿ ಕೆಲಸ ಮಾಡದಿರುವುದು, ಪೋಷಕರ ಆಸಕ್ತಿ ಕೊರತೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದರು.

Advertisement

ಕೆಲವು ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು ಫಲಿತಾಂಶ ಕಡಿಮೆಯಾಗಲು ಶಿಕ್ಷಕರ ಕೊರತೆ ಇದೆ
ಎಂದು ಸಭೆಯ ಗಮನಕ್ಕೆ ತಂದರು. ಇದರಿಂದ ಮತ್ತಷ್ಟು ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನೀವು ತೆಗೆದುಕೊಳ್ಳುವ ವಿಷಯವಾರು ಫಲಿತಾಂಶ ಎಷ್ಟಿದೆ, ನಿಮ್ಮ ವಿಷಯದಲ್ಲಿ ಮಕ್ಕಳು ಏಕೆ ಫೇಲ್‌ ಆಗಿದ್ದಾರೆ ಎಂದು ತಿಳಿಸಿ. ಖಾಲಿ ಹುದ್ದೆಗಳ ನೆಪ ಹೇಳಬೇಡಿ. ಶಾಲೆಗಳಲ್ಲಿರುವ ಅನುದಾನ ಬಳಸಿಕೊಂಡು ನುರಿತ ತಜ್ಞ ಶಿಕ್ಷಕರ ನೇಮಕ
ಮಾಡಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ನಿವೃತ್ತ ಶಿಕ್ಷಕರನ್ನು ಹೊರಗುತ್ತಿಗೆ ಮೂಲಕ ತೆಗೆದುಕೊಳ್ಳಲು ಅವಕಾಶವಿದೆ, ಏಕೆ ತೆಗೆದುಕೊಂಡು ಪಾಠ ಮಾಡಿಸಲಿಲ್ಲ, ಪ್ರತಿ ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಫಲಿತಾಂಶವನ್ನು ಗಮನಿಸಿ ಶಾಲಾ ಶಿಕ್ಷಕರಿಗೆ ಎಚ್ಚರಿಕೆ ನೀಡಬೇಕು. ಮುಂಬರುವ ಪರೀಕ್ಷೆಯಲ್ಲಿ ಉತ್ತಮ
ಸಾಧನೆ ಮಾಡುವಂತೆ ಸೂಚಿಸಿದರು. ಡಿಡಿಪಿಐ ಅಂಥೋಣಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಯ್ಯ, ಎಸ್‌. ನಾಗಭೂಷಣ ಮತ್ತಿತರರು ಇದ್ದರು.

ಶೇ. 100 ಫಲಿತಾಂಶ ಸಾಧನೆಗೆ ಶ್ರಮಿಸಿ ಮೆರಿಟ್‌ ಆಧಾರದಲ್ಲಿ ಶಿಕ್ಷಕರ ನೇಮಕ ಆಗುತ್ತದೆ. ಕಡಿಮೆ ಮೆರಿಟ್‌ ಬಂದವರು ಎಲ್ಲೂ ಕೆಲಸ ಸಿಗದೆ ಖಾಸಗಿ ಶಾಲೆಗಳಿಗೆ ಸೇರುತ್ತಾರೆ. ಆ ಶಾಲೆಗಳ ಫಲಿತಾಂಶಕ್ಕಿಂತ ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆಯಾಗುವುದು ವಿಪರ್ಯಾಸ. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡಬೇಕು. ಮುಖ್ಯಶಿಕ್ಷಕರು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಅನುತ್ತೀರ್ಣರಾಗುವ ಮಕ್ಕಳಿಗೆ ಸತತ ಗುಂಪು ಪಾಠ, ವಿಶೇಷ ತರಗತಿಗಳನ್ನು ಏರ್ಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕೆಲವು ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರಿದ್ದರೂ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲೇ ಅನುತ್ತೀರ್ಣರಾಗಿದ್ದಾರೆ. ಇನ್ನು ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳ ಪರಿಸ್ಥಿತಿ ಏನು, ಅನುತ್ತೀರ್ಣ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಮೂರು ತಿಂಗಳಲ್ಲಿ ಅವರನ್ನು ತಯಾರು ಮಾಡಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next