Advertisement

ಸ್ವಂತ ಜಿಲ್ಲೆಗೆ ವರ್ಗಾವಣೆಗೆ ಶಿಕ್ಷಕರ ಆಗ್ರಹ

08:55 PM Jun 02, 2022 | Team Udayavani |

ಬೆಂಗಳೂರು:  ಶಿಕ್ಷಕರು ತಮ್ಮ “ಸೇವಾವಧಿಯಲ್ಲಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ’ ಹೊಂದಲು ಅವಕಾಶ ಮಾಡಕೊಡುವಂತೆ ಒತ್ತಾಯಿಸಿ ನೂರಾರು ಪ್ರಾಥಮಿಕ ಶಾಲಾ ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

Advertisement

ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ವರ್ಷ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಾಮಾನ್ಯವಾಗಿ 3ರಿಂದ 5 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರೆಂಬ ನಿಯಮಗಳಿವೆ. ಆದರೆ, 10, 15 ಮತ್ತು 20 ವರ್ಷ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಸರ್ಕಾರದ ವರ್ಗಾವಣೆ ನಿಯಮಗಳು ಸಹಕರಿಸುತ್ತಿಲ್ಲ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈಗಿನ ವರ್ಗಾವಣೆ ನಿಯಮದ ಪ್ರಕಾರ ಯಾವ ತಾಲ್ಲೂಕಿನಲ್ಲಿ ಶೇ.25ಕ್ಕಿಂತ ಹೆಚ್ಚಿನ ಶಿಕ್ಷಕರ ಖಾಲಿ ಹುದ್ದೆಗಳು ಇರುವಂತಹ ತಾಲ್ಲೂಕಿನಲ್ಲಿ ವರ್ಗಾವಣೆಗೆ ಅವಕಾಶವೇ ಇಲ್ಲ. ಸರ್ಕಾರವು ವರ್ಗಾವಣೆ ಮಾಡಿದರೂ ಈ ನಿಯಮದಿಂದ ನಮಗೆ ವರ್ಗಾವಣೆ ಭಾಗ್ಯ ಲಭಿಸದೆ ಹಲವಾರು ವರ್ಷಗಳಿಂದ ವರ್ಗಾವಣೆಯಿಂದ ವಂಚಿತರಾಗಿ ಪರದಾಡುತ್ತಿದ್ದೇವೆ ಎಂದು ತಿಳಿಸಿದರು.

ಹಲವಾರು ಶಿಕ್ಷಕರು ಬೇರೆ ಬೇರೆ ದೂರದ ಜಿಲ್ಲೆಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಗಂಡ, ಹೆಂಡತಿ, ಮಕ್ಕಳು, ತಂದೆ-ತಾಯಿಗಳು ಎಲ್ಲರೂ ಬೇರೆ ಬೇರೆ ಕಡೆ ಜೀವನ ನಡೆಸುವಂತಾಗಿದೆ. ಮತ್ತಷ್ಟು ಪ್ರಕರಣಗಳಲ್ಲಿ ವರ್ಗಾವಣೆಯ ವಿಚಾರ ಕುಟುಂಬ ಕಲಹಗಳಾಗಿ ಮಾರ್ಪಾಡಾಗಿವೆ. ಗಂಡ-ಹೆಂಡತಿ ವಿಚ್ಛೇದನವಾಗುವ ಮಟ್ಟ ತಲುಪಿವೆ. ಒಂದೆಡೆ ಕುಟುಂಬದಲ್ಲಿ ಶಾಂತಿಯುತವಾಗಿಲ್ಲ, ಮತ್ತೂಂದೆಡೆ ಶಾಲೆಗಳಲ್ಲಿಯೂ ನೆಮ್ಮದಿಯಂದ ವೃತ್ತಿ ನಿರ್ವಹಿಸಲಾಗದೆ. ಮಾನಸಿಕವಾಗಿ ಒದ್ದಾಡುವಂತಾಗಿದೆ. ಆದ್ದರಿಂದ “ಸೇವಾವಧಿಯಲ್ಲಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ’ ಹೊಂದಲು ಅವಕಾಶ ಮಾಡಕೊಡುವಂತೆ ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next