ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಅದೇ ತಾನೇ ಮುಗಿದಿತ್ತು. ನಡುವೆ ಗಾಂಧಿ ಜಯಂತಿಯೂ ಬಂದು, ಗಾಂಧೀಜಿಯವರ ಬಗ್ಗೆ ಉಪನ್ಯಾಸ, ನಾಟಕ ಪ್ರದರ್ಶನ ದಿನಪೂರ್ತಿ ನಡೆದಿದ್ದವು. ಶಿಬಿರಕ್ಕಾಗಿ ಮಾಡಿದ ಖರ್ಚು ವೆಚ್ಚದ ವಿವರಗಳನ್ನು ಪ್ರಾಂಶುಪಾಲರಿಗೆ ಸಲ್ಲಿಸಿದ್ದರಿಂದ ಅರ್ಧ ಲಕ್ಷದಷ್ಟು ಹಣವೂ ಕೈಗೆ ಬಂದಿತ್ತು. ಅದನ್ನು ಪುಟ್ಟ ಪರ್ಸಿನಲ್ಲಿ ತುರುಕಿ ಅವಸರದಲ್ಲಿಯೇ ಮಕ್ಕಳ ಸಭೆಗೆ ಹೋಗಿದ್ದೆ. ಮರುದಿನದಿಂದ ದಸರಾ ರಜೆ ಪ್ರಾರಂಭವಾಗಿತ್ತು.
ಬಂಧುವೊಬ್ಬರು ಚಿನ್ನ ಖರೀದಿಗೆಂದು ಬಂದಿದ್ದರಿಂದ ಅವರೊಂದಿಗೆ ಅಂಗಡಿಗೆ ಹೋಗಿ ಹಣ ಕಡಿಮೆಯಾಯಿತೆಂದು ಪುಟ್ಟ ಪರ್ಸಿಗೆ ಕೈಹಾಕಿದರೆ ಚೀಲದಲ್ಲಿ ಪರ್ಸಿಲ್ಲ! ಅರೆರೆ, ದೊಡ್ಡ ಮೊತ್ತದ ಹಣ ಮಂಗಮಾಯವಾಗಿದೆ ಎಂದು ಮನೆಯಿಡೀ ಹುಡುಕದ ಜಾಗವಿಲ್ಲ. ಮರುದಿನವೇ ಕಾಲೇಜಿಗೂ ತೆರಳಿ ಸಿ.ಸಿ. ಕ್ಯಾಮೆರಾದಲ್ಲಿ ಸುಳಿವಿಗಾಗಿ ತಡಕಾಡಿದರೂ ಪರ್ಸ್ ಸಿಗಲಿಲ್ಲ.
ರಜೆ ಮುಗಿದು ನಾಳೆ ಕಾಲೇಜು ಪ್ರಾರಂಭವೆನ್ನುವ ಹೊತ್ತಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಫೋನ್. “ಮೇಡಂ, ಆ ದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ಬಿಟ್ಟು ಹೋಗಿದ್ದ ವಸ್ತುಗಳನ್ನೆಲ್ಲ ಅವರವರಿಗೆ ಮುಟ್ಟಿಸುವ ಜವಾಬ್ದಾರಿ ವಹಿಸಿದ್ರಿ. ಹಣಿಗೆ, ಕನ್ನಡಿ, ಕ್ಲಿಪ್… ಹೀಗೆ ಎಲ್ಲವನ್ನೂ ಯಾರದ್ದೆಂದು ಪತ್ತೆ ಹಚ್ಚಿ ಅವರವರಿಗೆ ಕೊಟ್ಟಿದ್ದೆ. ಅಲ್ಲಿಯೇ ಬಿದ್ದಿದ್ದ ಪರ್ಸ್ ಮಾತ್ರ ಯಾರದ್ದೂ ಅಲ್ಲವೆಂದು ಹೇಳಿದ್ದರಿಂದ ನನ್ನ ಬ್ಯಾಗಿನಲ್ಲಿಯೇ ಉಳಿದಿತ್ತು. ನಾಳೆಯ ಪುಸ್ತಕಗಳನ್ನು ತುಂಬಿಸಲೆಂದು ಇಂದು ಬ್ಯಾಗಿಗೆ ಕೈಹಾಕಿದರೆ ಆ ಪರ್ಸ್ ಸಿಕ್ಕಿತು. ತೆರೆದು ನೋಡಿದರೆ ತುಂಬಾ ಹಣವಿದೆ ಮೇಡಂ. ನಂಗೆ ಭಯವಾಗ್ತಿದೆ! ಏನು ಮಾಡೋದು ಮೇಡಂ?’ ಎಂದು ಆತಂಕದಿಂದ ಕೇಳಿದಳು. “ಅದು ನನ್ನ ಪರ್ಸ್, ನಾಳೆ ಕಾಲೇಜಿಗೆ ತಗೊಂಡು ಬಾ’ ಅಂದೆ.
ಮರುದಿನ ಪರ್ಸ್ ತಂದುಕೊಟ್ಟವಳಿಗೆ-“ಹಣ ಸಿಕ್ಕಿದರೆ ಖುಷಿಯಾಗಬೇಕು, ಭಯವಾದದ್ದು ಯಾಕೆ?’ ಎಂದು ಪ್ರಶ್ನಿಸಿದರೆ, “ಅದು ನನ್ನ ಹಣವಲ್ಲವಲ್ಲ ಮೇಡಂ, ಶಿಬಿರದಲ್ಲಿ ಪ್ರಾಮಾಣಿಕತೆಯ ಪಾಠ ಹೇಳಿದ್ದಿರಿ. ಆ ಪಾಠವನ್ನು ನಾವೇ ಪಾಲಿಸದಿದ್ದರೆ ಹೇಗೆ ಮೇಡಂ?’ ಎಂದಳು. ವರ್ಷದ ಕೊನೆಗೆ ನಡೆದ ಸಮಾರೋಪದಲ್ಲಿ ಈ ಘಟನೆಯನ್ನು ಹೇಳಿ ಅವಳನ್ನು ಸನ್ಮಾನಿಸುವಾಗ ಎಲ್ಲರ ಕಣ್ಣಂಚುಗಳೂ ಒದ್ದೆಯಾಗಿದ್ದವು.
-ಸುಧಾ ಹೆಗಡೆ, ಸರ್ಕಾರಿ ಕಾಲೇಜು, ಉಡುಪಿ