ಮಹಾಚುರುಕಿನ, ನಗು ಹೊತ್ತೇ ಹುಟ್ಟಿದವನಂತಿರುವ ಹುಡುಗ ಸಂತೋಷ. ಎರಡನೇ ತರಗತಿ ಓದುತ್ತಿರುವ ಈತ, ನಾಲ್ಕು ವರ್ಷದ ತನ್ನ ತಂಗಿಯನ್ನ ತುಂಬಾ ಹಚ್ಚಿಕೊಂಡಿದ್ದಾನೆ. ಅವನು ಮಾತನಾಡುವಾಗಲೆಲ್ಲ ಅಕ್ಕ, ಅಣ್ಣ, ತಮ್ಮ, ತಂಗಿ, ಅಪ್ಪ, ಅಮ್ಮ, ಅಜ್ಜಿಯೇ ತುಂಬಿರುತ್ತಾರೆ. ಪ್ರಾಣಿ ಪಕ್ಷಿ ಗಿಡಮರಕ್ಕೂ ಅವನು ಹೀಗೆಯೇ ಕರೆಯುವುದು. ಪಟಪಟ ಮಾತನಾಡುವ ಸಂತೋಷ ಅನೇಕ ಸಂಗತಿಗಳನ್ನ ಹೇಳುತ್ತಿರುತ್ತಾನೆ. “ಸರ್, ನಮ್ ಗಿಡದ ಕೈ ಮುರದರ್ರಿ, ನಮ್ ಗಿಡದ್ರೀ ಕಾಲಿಗೆ ಗಾಯ ಮಾಡ್ಯರ್ರಿ… ಸರ್, ಇಂವ ರ್ರಿ ಗಿಡದ ತಲಿ ಒಡದಾನ್ರೀ’ ಎನ್ನುವಾಗಲೆಲ್ಲ ಈ ಮಗು ನನಗೇನೋ ಕಲಿಸುತ್ತಿದೆ ಎಂಬ ಭಾವ ನನ್ನದು.
ಮೊನ್ನೆ ಏನೋ ಗುಟ್ಟು ಹೇಳುವವನಂತೆ ಬಳಿ ಬಂದು- “ಸರ್, ಸೀತಾಫಲದಾಗ ಒಬ್ಬ ತಮ್ಮ- ಒಂದು ಪುಟ್ಟ ತಂಗೀನು ಬಂದೈತ್ರಿ’ ಎಂದ. “ತೋರಿಸು ನಡಿ’ ಅಂತ ಅವನೊಂದಿಗೆ ಹೋದರೆ, ಸೀತಾಫಲ ಗಿಡದಲ್ಲಿ ಎರಡು ಪುಟ್ಟ ಕಾಯಿ ಬಿಟ್ಟಿದ್ದನ್ನ ತೋರಿಸಿ- “ಇದು ತಮ್ಮಾರಿ, ಇದು ತಂಗೀರಿ’ ಎಂದ. ಮತ್ತೂಂದು ದಿನ “ಬುಲ್ ಬುಲ್ ಹಕ್ಕಿ ಗೂಡಿನ್ಯಾಗ ಎರಡು ತಮ್ಮಾ, ಒಂದು ತಂಗಿ ಬಂದಾವ್ರಿà’ ಎಂದ. ಹೋಗಿ ನೋಡಿದೆ. ಆ ಪುಟ್ಟ ಗೂಡಲ್ಲಿ ಮೂರು ಪುಟ್ಟ ತತ್ತಿಗಳಿದ್ದವು. ಈ ಮಾನವೀಯ ಭಾಷೆಯನ್ನ ಅವನ ಬಾಯಿಂದ ಕೇಳುತ್ತಿದ್ದರೆ, ಸಂಗೀತದ ವಾದ್ಯ ನುಡಿದಂತಿರುತ್ತದೆ.
ಒಂದು ದಿನ ಗಾಬರಿಯಿಂದ ಓಡಿ ಬಂದ. “ಏನು ಸಂತೋಷ?’ ಅಂದೆ. “ಗುಬ್ಬಿ ಅವ್ವ ಅಳಾಕತ್ತಾಳ ರ್ರಿ, ಅದರ ಅಪ್ಪಾನೂ ಅಳಾಕತ್ತಾನ್ರೀ’ ಅಂತ ನನ್ನನ್ನು ಎಳೆದುಕೊಂಡು ಗುಬ್ಬಿ ಗೂಡಿನ ಕಡೆ ಕರೆದುಕೊಂಡು ಹೋದ. ಶಾಲೆಯ ವರಾಂಡದಲ್ಲಿ ಹಾಕಿರುವ ದೊಡ್ಡ ಬಲ್ಬ್ ಹಿಂದೆ ಗುಬ್ಬಿಗಳು ಗೂಡು ಕಟ್ಟಿವೆ. ಅಲ್ಲಿ ಮರಿಯೊಂದು ಹೇಗೋ ಉರುಲು ಬಿದ್ದು ಸತ್ತಿದೆ. ಅದಕ್ಕೆ ಅದರ ತಂದೆ ತಾಯಿ ಕಿರುಚುತ್ತಿದ್ದವು. ಅವುಗಳ ಸಂಕಟ ಕೇಳಿಸಿದಾಕ್ಷಣ ಈತ ಓಡಿ ಬಂದಿದ್ದ. ಮೆಲ್ಲಗೆ ಆ ಮರಿಯನ್ನ ಇಳಿಸಿ, ಅದರ ಶವ ಸಂಸ್ಕಾರ ಮಾಡಿದೆವು. ನಾನು ಏಕಾಂತದಲ್ಲಿದ್ದಾಗಲೆಲ್ಲ ಸಂತೋಷ ಕಲಿಸಿದ ಸಂವೇದನೆಯ ಪಾಠಗಳು ನೆನಪಾಗಿ ಎದೆ ತೇವಗೊಳ್ಳುತ್ತದೆ.
-ವೀರಣ್ಣ ಮಡಿವಾಳರ,
ಶಿಕ್ಷಕರು, ಅಂಬೇಡ್ಕರ್ ನಗರ,
ನಿಡಗುಂದಿ, ಬೆಳಗಾವಿ ಜಿಲ್ಲೆ