ಹುಣಸೂರು: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ತನ್ನ ಶಿಷ್ಯನಿಗೆ ವಿದ್ಯೆಯನ್ನು ಧಾರೆಯೆರೆಯುವ ಗುರು- ಶಿಷ್ಯ ಪರಂಪರೆಗೆ ಈ ನೆಲ ಸಾಕ್ಷಿಯಾಗಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ತನ್ನ ಶಿಷ್ಯ ತನ್ನನ್ನೂ ಮೀರಿ ಬೆಳೆಯಬೇಕು ಎನ್ನುವ ಆಸೆಯಿಂದ ಗುರು ವಿದ್ಯೆ ಕಲಿಸುತ್ತಾನೆ. ಇದಕ್ಕಿಂತ ಹೆಚ್ಚಿನ ಗುರು ಕಾಣಿಕೆ ಏನನ್ನು ಆತ ಬಯಸುವುದಿಲ್ಲ. ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ ಅಬ್ದುಲ್ ಕಲಾಂ ತಮಗೆ ಭಾರತರತ್ನ ಪ್ರಶಸ್ತಿದೊರೆತ ವೇಳೆ ತಮ್ಮ ಗುರುಗಳ ಹಸ್ತದಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಅಂತಹ ಗುರು-ಶಿಷ್ಯ ಪರಂಪರೆಗೆ ಈ ದೇಶದ ನೆಲ ಸಾಕ್ಷಿಯಾಗಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮುನ್ನ ಚರ್ಚೆ ನಡೆಸಿ, ಜಾರಿಗೊಳಿಸುವ ಇಂಗಿತವನ್ನು ವಿಶ್ವನಾಥ್ ತಿಳಿಸಿದ್ದು, ಬೆಂಬಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಕೊಠಡಿಯಲ್ಲಿ ಪಾಠ ಮಾಡದವರು ಶಿಕ್ಷಣ ಸಮಿತಿಯಲ್ಲಿರುವುದು ದುರಂತವೇ ಸರಿ. ಸಮಿತಿಯಲ್ಲಿ ಶಿಕ್ಷಕರು, ಪೋಷಕರನ್ನೊಳಗೊಂಡ ಸಮಿತಿ ರಚಿಸಿ, ಚರ್ಚೆ ನಡೆಸಿದಾಗ ಮಾತ್ರ ಸರಿಪಡಿಸಲು ಸಾಧ್ಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ಪದ್ಮಮ್ಮ, ಜಿಪಂ ಸದಸ್ಯರಾದ ಜಯಲಕ್ಷ್ಮೀ ಸಿ.ಟಿ.ರಾಜಣ್ಣ,ಸಾವಿತ್ರಮ್ಮ, ಕಟ್ಟನಾಯಕ, ತಾಪಂಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಸನ್ನ, ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ತಹಶೀಲ್ದಾರ್ ಐ.ಇ. ಬಸವರಾಜು, ಇಒ ಗಿರೀಶ್, ಬಿಆರ್‌ಸಿ ಸಂತೋಷ್ ಕುಮಾರ್, ಚನ್ನವೀರಪ್ಪ, ಗೋವೀಂದೇಗೌಡ, ಸ್ವಾಮಿ ಇದ್ದರು.