Advertisement

ಮಕ್ಕಳಿಂದಲೇ ಶಿಕ್ಷಕರ ದಿನಾಚರಣೆ ಸೂಕ್ತ: ಜಿಲ್ಲಾ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಭಟ್‌ ಆಶಯ

11:24 PM Sep 05, 2020 | Team Udayavani |

ಉಡುಪಿ: ಶಿಕ್ಷಕರ ಪ್ರಾಮುಖ್ಯತೆ ಮಕ್ಕಳಿಗೆ ತಿಳಿಯಬೇಕು. ಆಗ ಮಕ್ಕಳಿಗೆ ಶಿಕ್ಷಕರ ಅಗತ್ಯದ ಅರಿವಾಗುತ್ತದೆ. ಮುಂದಿನ ವರ್ಷದಿಂದ ಶಿಕ್ಷಕರ ದಿನಾಚರಣೆಯನ್ನು ಮಕ್ಕಳಿಂದ ಆಚರಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಸೈಂಟಿ ಸಿಸಿಲಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಉಡುಪಿ ವಲಯ/ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ. ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಎಲ್ಲರೂ ಸಂಕಲ್ಪ ಮಾಡಬೇಕು. ಮಕ್ಕಳಂತೆ ಶಿಕ್ಷಕರೂ ಕೂಡ ಈಗ ಅಪ್‌ಡೇಟ್‌ ಆಗುವ ಅನಿವಾರ್ಯತೆ ಇದೆ. ಹೀಗಾದರೆ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಜಿಲ್ಲೆಯಲ್ಲಿ ಇಂತಹ ಶಿಕ್ಷಕರಿರುವ ಕಾರಣ ಶೈಕ್ಷಣಿಕ ಪ್ರಗತಿಯಲ್ಲಿ ಮುಂದುವರಿದಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿಯುವಂತಾಗಲಿ ಎಂದು ಅವರು ಹಾರೈಸಿದರು.

ಶಿಕ್ಷಕರ ಶ್ರಮ ಅಪಾರ
ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಪ್ರಸ್ತಾವನೆಗೈದು, ಎಸೆಸೆಲ್ಸಿ ಅನುತ್ತೀರ್ಣ ಆಗುತ್ತೇನೆಂದು ತಿಳಿದ ಶಿಕ್ಷಕರು ನನ್ನಲ್ಲಿ ಧೈರ್ಯತುಂಬಿ ನಾನು ತೇರ್ಗಡೆಹೊಂದಲು ಪ್ರೇರಣೆ ನೀಡಿದ್ದರು. ಇಂದು ಜಿಲ್ಲಾಧಿಕಾರಿಯಾಗಲು ಶಿಕ್ಷಕರ ಶ್ರಮವೂ ಕಾರಣವಾಗಿದೆ. ಕೋವಿಡ್ ಕಷ್ಟಕಾಲದಲ್ಲಿಯೂ ಶಿಕ್ಷಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಅಪಾರ ಶ್ರಮಿಸಿದ್ದಾರೆ ಎಂದರು.

ನಿರಂತರ ಪ್ರಕ್ರಿಯೆ
ಶಿಕ್ಷಣ ಎಂಬುದು ನಿರಂತರ ಪ್ರಕ್ರಿಯೆ. ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಮಕ್ಕಳನ್ನು ಪ್ರೀತಿಸಿ ಅವರ ಮನಸ್ಸು ಗೆಲ್ಲಬೇಕು. ಹೊಟ್ಟೆಪಾಡಿಗಾಗಿ ಹಾಗೂ ಓದಿನ ಬಗ್ಗೆ ಆಸಕ್ತಿ ಇಲ್ಲದವರು ಶಿಕ್ಷಕ ವೃತ್ತಿಗೆ ಬರಬಾರದು. ಅಂತಹವರು ಇತರ ಕ್ಷೇತ್ರಗಳ ಬಗ್ಗೆ ಗಮನಹರಿಸಿದರೆ ಉತ್ತಮ. ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿದ್ದು ಕಾಲಕ್ಕೆ ತಕ್ಕಂತೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಡಾ| ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಕಾಪು ಶಾಸಕ ಲಾಲಾಜಿ ಮೆಂಡನ್‌, ಜಿ.ಪಂ. ಸದಸ್ಯರಾದ ಗೀತಾ ಸುವರ್ಣ, ಶಿಲ್ಪಾ ಸುವರ್ಣ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ, ಉಡುಪಿ ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್‌ ಉಪಸ್ಥಿತರಿದ್ದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷ ಶಯನ ಕಾರಿಂಜ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next