ಪುರಾಣ ಕಾಲದಿಂದಲೂ ದೇವರುಗಳಿಗು ಒಬ್ಬ ಗುರುವಿರುತ್ತಿದ್ದರು. ಅಧ್ಯಾಪಕ ಅತ್ಯಂತ ಶ್ರೇಷ್ಠ ವೃತ್ತಿ. ಈಗೀಗ ಬದಲಾವಣೆಯ ಮೊರೆ ಹೋದ ಜನರ ಶಿಕ್ಷಣ ಮತ್ತು ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಒಬ್ಬ ವ್ಯಕ್ತಿ ಉನ್ನತ್ತ ಮಟ್ಟಕ್ಕೇರುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಗುರುವನ್ನು ದೇವರಿಗೆ ಹೊಲಿಸುತ್ತೇವೆ.
ಕೆಲವೊಮ್ಮೆ ವಿಧ್ಯಾರ್ಥಿಗಳು ಗೊತ್ತಿಧ್ದೋ ಗೊತ್ತಿಲ್ಲದೆಯೋ ಶಿಕ್ಷಕರನ್ನು ಅನುಸರಿಸುತ್ತಾರೆ. ಅವರ ಮೌಲ್ಯಗಳನ್ನು ತಮ್ಮಲ್ಲೂ ರೂಢಿಸಿಕೊಳ್ಳುತ್ತಾರೆ. ಅಧ್ಯಾಪಕರು ರೂಪಿಸಿರುವ ಶಿಸ್ತಿನ ಮಕ್ಕಳೇ ಭವಿಷ್ಯದಲ್ಲಿ ದೇಶ ಕಟ್ಟುವ ದೀಮಂತ ನಾಯಕರಾಗುವುದು. ಶಿಕ್ಷಕರು ಬಿತ್ತಿದ ಆಲೋಚನೆ ವಿಧ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆ.
ಗುರುಗಳೆಂದರೆ ನನಗೆ ಮೊದಲು ನೆನಪಾಗುವುದು ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರು. ನಾವು ಕಲಿತು ಬದುಕಿನ ಬಂಡಿ ಸವೆಸುವಾಗ ಅಲ್ಲೆಲ್ಲೋ ಶಿಕ್ಷಕರ ಕುರಿತು ಮಾತು ಬಂದರೆ ನನಗೆ ನಾವು ಒಂದನೇ ತರಗತಿಯ ಮೂಲೆಯಲ್ಲಿ ಕೂತು ಕಪ್ಪಲಗೆಯ ಮೇಲೆ ಬರೆದ ಅಕ್ಷರವನು ತಪ್ಪಾಗಿ ಬರೆದಾಗ ಕೈ ಹಿಡಿಸಿ ತಿದ್ದಿದ್ದ ಶಿಕ್ಷಕರ ನೆನಪಾಗುತ್ತದೆ. ಶಿಕ್ಷಕರ ದಿನಾಚರಣೆಯನ್ನು ಕಾಲೇಜು ದಿನಗಳಲ್ಲಿ ತರಗತಿವಾರು ಹಣ ಸಂಗ್ರಹಿಸಿ, ಉಪನ್ಯಾಸಕರಿಗೆ ಗೊತ್ತಿರದೆ ಏರ್ಪಡಿಸಿದ ಆಚರಣೆಯ ತಣುಕು ಕಣ್ಣೆದುರು ಹಾದು ಹೋಗುತ್ತದೆ. ಈಗಲೂ ಕೆಲಮೊಮ್ಮೆ ಎಷ್ಟೊಂದು ಶಿಸ್ತಾಗಿದ್ಯಾ ನೀನು? ಎಂದಾಗಲೂ ನಾನು ಶಿಸ್ತಿಂದ ವರ್ತಿಸದಿದ್ದಾಗ ಬುದ್ಧಿ ಹೇಳಿ ತಿದ್ದಿದ ನನ್ನ ಗುರುಗಳು ನೆನಪಾಗುತ್ತಾರೆ.
ಉಪನ್ಯಾಸಕರು ಪ್ರತಿಯೊಂದು ವಿಧ್ಯಾರ್ಥಿಯ ದೌರ್ಬಲ್ಯ ಮತ್ತು ಶಕ್ತಿಯನ್ನು ಗುರುತಿಸಿ, ಅವರ ಬದುಕನ್ನು ಉದ್ದಿಪನ ಮಾಡುತ್ತಾರೆ. ನನಗಿಂತಲೂ ಉನ್ನತ ಸ್ಥಾನಕ್ಕೆ ತನ್ನ ವಿಧ್ಯಾರ್ಥಿ ಏರಿದಾಗ ಮೊದಲು ಸಂತಸ ಪಡುವವರು ಶಿಕ್ಷಕರೇ. ಬೋಧನೆಯು ಎಲ್ಲ ಕೆಲಸದಂತಲ್ಲ, ಯಾವುದೇ ನೀರಿಕ್ಷೆಗಳಿಲ್ಲದೆ ವಿದ್ಯಾರ್ಥಿಯ ಧನಾತ್ಮಕ ಬೆಳವಣಿಗೆಯೊಂದೇ ಶಿಕ್ಷಕರ ಉದ್ದೇಶವಾಗಿರುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಪುರಂದರ ದಾಸರ ಮಾತು ಪ್ರತಿಧ್ವನಿ ಸುತ್ತಲೆ ಇರಬೇಕು. ವಿದ್ಯಾರ್ಜನೆ ಮಾಡಿದ ನಾವು ಸಜ್ಜನರಾಗು ವುದನ್ನು ಕಲಿಯಬೇಕು. ಗಳಿಸಿದ ವಿದ್ಯೆಯ ಪ್ರತಿಬಿಂಬ ನಮ್ಮ ನುಡಿ, ನಡೆ ಮತ್ತು ನಡತೆಯಲ್ಲಿರಬೇಕು.
ನಿಸ್ವಾರ್ಥದಿಂದ ನಮ್ಮ ಏಳಿಗೆಗಾಗಿ ಶ್ರಮಿಸುವ ಶಿಕ್ಷಕರಿಗೆ ನಾವು ಕೊಡುವ ದೊಡ್ಡ ಕೊಡುಗೆ ಎಂದರೆ, ಅವರು ಕೊಟ್ಟ ವಿದ್ಯೆಯನ್ನು ಬಳಸಿ ಸಮಾಜಕ್ಕೆ ಒಳಿತಾಗುವಂತೆ ಬದುಕುವುದು. ಈತ ನನ್ನ ಶಿಷ್ಯ/ಶಿಷ್ಯೇ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಬದುಕುವುದು.
ನನ್ನೆಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-ಸ್ವಸ್ತಿಕ್ ಚಿತ್ತೂರು
ಎಸ್.ಕೆ.ವಿ.ಎಂ.ಎಸ್. ಕೊಟೇಶ್ವರ