ಉಡುಪಿ: ಜಾತಿ, ಧರ್ಮ, ವೈಯಕ್ತಿಕ ಬದುಕಿಗಿಂತ ದೇಶ ದೊಡ್ಡದು ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುವಂಥ ಶಿಕ್ಷಣ ವ್ಯವಸ್ಥೆ ಅಗತ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಇ ಹಾಗೂ ಬಿಇಒ ಕಚೇರಿ, ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಯೋ ಗದಲ್ಲಿ ಗುರುವಾರ ಕಿದಿಯೂರು ಹೊಟೇಲ್‌ನಲ್ಲಿ ಜರಗಿದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತ ನಾಡಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತೆ ಆಗಬೇಕು ಎಂದು ಆಶಿಸಿದರು.
ಜಿಲ್ಲೆಯಲ್ಲಿ ಶೇ.95 ರಷ್ಟು ಶಿಕ್ಷಕರು ಪ್ರಾಮಾಣಿಕ, ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಲವರು ಸರಿ ಯಾಗಿ ಕಾರ್ಯ ನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಎಸೆಸೆಲ್ಸಿಯಲ್ಲಿ ಶೇ.100ರಷ್ಟು ಸಾಧನೆಗೆ ಕೂಡಲೇ ಯೋಜನೆ ರೂಪಿಸಿ ಎಂದು ಡಿಸಿ ಡಾ| ಕೆ. ವಿದ್ಯಾಕುಮಾರಿ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಸುವರ್ಣ, ಬುದ್ಧಿವಂತರ ಜಿಲ್ಲೆ ಎಂಬ ಸಾಧನೆಯನ್ನು ಉಳಿಸಿಕೊಳ್ಳಲು ಶಿಕ್ಷಕರ ಪರಿಶ್ರಮ ಆಗತ್ಯ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಸಿಇಒ ಪ್ರತೀಕ್ ಬಾಯಲ್ ಹಾಗೂ ಎಸ್.ಪಿ. ಡಾ| ಅರುಣ್ ಕೆ. ಶುಭ ಹಾರೈಸಿದರು. ಸಾಹಿತಿ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.
ಆಭರಣ ಜುವೆಲರಿ ವತಿಯಿಂದ ಶಿಕ್ಷಕರಿಗೆ ಲಕ್ಕಿ ಕೂಪನ್ ನೀಡಿ, ಕೊನೆಗೆ ಡ್ರಾ ನಡೆಸಿ 1 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಹಾಗೂ 25 ಗ್ರಾಂ ಬೆಳ್ಳಿಯ ಮೂರು ಬಹುಮಾನ ನೀಡಲಾಯಿತು.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ವಲಯದ ನಿವೃತ್ತ ಶಿಕ್ಷಕರನ್ನು ಸಮ್ಮಾನಿಸಲಾಯಿತು. ಉದ್ಯಮಿ ಭುವ ನೇಂದ್ರ ಕಿದಿಯೂರು, ಡಯಟ್ ಪ್ರಾಂಶುಪಾಲ ಗೋವಿಂದ ಮಡಿವಾಳ, ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಡಿಡಿಪಿಐ ಕೆ. ಗಣಪತಿ ಸ್ವಾಗತಿಸಿ, ಬಿಇಒ ಡಾ| ಯಲ್ಲಮ್ಮ ವಂದಿಸಿದರು.