ತುಮಕೂರು: ನಮ್ಮ ಮಕ್ಕಳಿಗೆ ಜಾತಿ-ಭೇದವಿಲ್ಲದಿರುವಂತಹ, ಸೋಲು-ಗೆಲುವನ್ನು ಸಮಾನವಾಗಿ ಕಾಣುವಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಹೆಚ್ಚಿನ ಅಂಕಗಳಿಸುವ ಶಿಕ್ಷಣಕ್ಕಿಂತ ಸಾಮಾಜಿಕ ಪ್ರಜ್ಞೆ ಮೂಡಿಸುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯಿದೆ ಎಂದರು.
ಶಿಕ್ಷಕರಿಗೆ ನಮನ: ಶಿಕ್ಷಕರಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವೆಂಬುದು ಡಾ.ಎಸ್.ರಾಧಾಕೃಷ್ಣನ್ ಬಲವಾಗಿ ನಂಬಿದ್ದರು. ಶಿಕ್ಷಕ ಹಾಗೂ ವಿದ್ಯಾರ್ಥಿಗೆ ವಿಶ್ವವನ್ನೇ ಬದಲಾಯಿಸುವ ಶಕ್ತಿಯಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಶಿಕ್ಷಕರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದ ಅವರು ಪ್ರತಿಯೊಬ್ಬರ ಉತ್ತಮ ಜೀವನವನ್ನು ರೂಪಿಸುವಂತಹ ಶಿಕ್ಷಕರಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಜೀವ-ಜೀವನ ಬಹಳ ಮುಖ್ಯ: ನಮಗೆಲ್ಲ ತಾಯಿಯೇ ಮೊದಲ ಗುರುವಾದರೂ, ಶೈಕ್ಷಣಿಕ ಜೀವನದಲ್ಲಿ ವಿದ್ಯೆ ಕಲಿಸುವ ಮೂಲಕ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ನಮ್ಮ ಜೀವ ಹಾಗೂ ಜೀವನ ಇವೆರಡೂ ಬಹಳ ಮುಖ್ಯವಾದುದು ಎಂದು ತಿಳಿಸಿದರು.
ಶಿಕ್ಷಕರ ಕಾರ್ಯ ಶ್ಲಾಘನೀಯ: ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಅಳವಡಿಸಿ ಕೊಳ್ಳಬೇಕು. ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್ ಮಹೇಶ್ವರಃ ಎಂದು ಗುರುಗಳನ್ನು ದೈವತ್ವಕ್ಕೆ ಹೋಲಿಸಿದ ಸಂಸ್ಕೃತಿ ನಮ್ಮದು. ಕೋವಿಡ್ -19 ಸಂಕಷ್ಟದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರ ಕಾರ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯೆ ಕಲಿಸಲು ಮುಂದೆ ಬಂದಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷ ಹಾಳಾಗದಂತೆ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ಮೂಲಕವೂ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರ ಸೇವೆ ಅನನ್ಯವಾದದ್ದು ಎಂದು ಅಭಿಪ್ರಾಯಪಟ್ಟರು. ಜಿಪಂ ಉಪಾಧ್ಯಕ್ಷೆ ಶಾರದಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ತಾಪಂ ಅಧ್ಯಕ್ಷೆ ಕವಿತಾ, ಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಲಕ್ಷ್ಮೀನರಸಿಂಹೇಗೌಡ, ನರಸಿಂಹಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಕೆ. ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ, ಶಿಕ್ಷಕರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.