Advertisement

ಮಕ್ಕಳನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಿ

05:14 PM Sep 06, 2020 | Suhan S |

ಬೀದರ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠವಾಗಿದೆ. ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸುವ ಮೂಲಕ ಮಕ್ಕಳನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಡಿಡಿಪಿಐ ಎಚ್‌.ಸಿ ಚಂದ್ರಶೇಖರ ಕರೆ ನೀಡಿದರು.

Advertisement

ನಗರದ ಎಸ್‌ಎಸ್‌ಎ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ| ಎಸ್‌. ರಾಧಾಕೃಷ್ಣನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡಾ| ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವನ್ನೇ ಶಿಕ್ಷಕರಿಗೆ ಅರ್ಪಿಸಿದ್ದಾರೆ. ಈ ಮೂಲಕ ಇಡೀ ಶಿಕ್ಷಕ ಸಮುದಾಯಕ್ಕೆ ಅವರು ಗೌರವ ತಂದಿದ್ದಾರೆ. ಅವರ ಆದರ್ಶ ನಮಗೆ ಮಾದರಿ ಎಂದರು.

ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಗಳು ಯಶಸ್ಸಿಯಾಗಿ ನಡೆಯುತ್ತಿವೆ. ಇದರಲ್ಲಿ ಶಿಕ್ಷಕರ ಪಾತ್ರ ತುಂಬಾನೇ ಇದೆ. ಕೋವಿಡ್ ಸಂಕಷ್ಟದಲ್ಲೂ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಜಿಲ್ಲೆಯ 1.52 ಲಕ್ಷ ಮಕ್ಕಳಿಗೆ 8000 ಶಿಕ್ಷಕರು ಪಾಠ ಮಾಡುತ್ತಿದ್ದು, ಶಿಕ್ಷಕರ ದಿನಕ್ಕೆ ವಠಾರ ಶಾಲೆಗಳ ಯಶಸ್ಸೇ ಕೊಡುಗೆ ಎಂದು ಬಣ್ಣಿಸಿದರು. ಡಿಡಿಪಿಐ ಕಚೇರಿ ಶಿಕ್ಷಕರಿಗೆ ಮಾತೃ ಮನೆ ಇದ್ದಂತೆ. ಜಿಲ್ಲೆಯ ಯಾವುದೇ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇಲ್ಲಿಗೆ ಬಂದರೆ ಅವರಿಗೆ ಸೂಕ್ತವಾಗಿ ಸ್ಪಂದಿಸಿ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದರೆ ಮಾತ್ರ ರಾಧಾಕೃಷ್ಣನ್‌ ಅವರ ಜನ್ಮದಿನ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಶಿಕ್ಷಕರು ಒಳ್ಳೆಯ ಕೆಲಸ ಮಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ, ಅಂದಾಗ ಮಾತ್ರ ಸೇವೆ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.

ಸಿಬ್ಬಂದಿ ಡಾ| ಮುಹಮ್ಮದ್‌ ಗುಲ್ಶನ್‌, ಪುರಖಾನ್‌, ಸಂತೋಷಕುಮಾರ ಪೂಜಾರಿ, ಬಾಬುಮಿಯಾ, ಗುಂಡಪ್ಪ ಹುಡಗೆ, ದೇವಿಂದ್ರಪ್ಪ ಸೇರಿದಂತೆ ಅನೇಕ ಸಿಬ್ಬಂದಿ ಹಾಜರಿದ್ದರು.

ಪ್ರಥಮ ದರ್ಜೆ ಮಹಿಳಾ ಕಾಲೇಜು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಮನೋಜಕುಮಾರ ಮಾತನಾಡಿ, ರಾಧಾಕೃಷ್ಣನ್‌ ಉನ್ನತ ಹುದ್ದೆಯಲ್ಲಿದ್ದರೂ ಸಹ ಶಿಕ್ಷಕ ವೃತ್ತಿಯನ್ನು ಮರೆಯಲಿಲ್ಲ. ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನಸ್ಸು ಗೆದ್ದಿದ್ದರು ಎಂದು ಬಣ್ಣಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶ್ರೀನಿವಾಸರೆಡ್ಡಿ ಮಾತನಾಡಿದರು. ವಿದ್ಯಾ ಪಾಟೀಲ, ಪ್ರೊ| ಸಚ್ಚಿದಾನಂದ ರುಮ್ಮಾ ಸೇರಿ ಉಪನ್ಯಾಸಕರು ಇದ್ದರು.

Advertisement

ವಿ.ಕೆ ಇಂಟರ್‌ ನ್ಯಾಷನಲ್‌ ಕಾಲೇಜು: ನಗರದ ವಿ.ಕೆ. ಇಂಟರ್‌ನ್ಯಾಷನಲ್‌ ಶಾಲೆ-ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ಎಲ್ಲ ವೃತ್ತಿಗಳಲ್ಲೇ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಂಡು ಹೋಗಬೇಕು. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಹೀಗಾಗಿ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ಹೇಳಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಕುಮಾರ ಕಾಂಗೆ, ಪ್ರಾಚಾರ್ಯ ಡಾ| ದಿಲೀಪ ಕಮಠಾಣೆ, ಸಿಬ್ಬಂದಿ ಇದ್ದರು. ಕರ್ನಾಟಕ ಕಾಲೇಜು: ನಗರದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಮಾತನಾಡಿ, ಒಬ್ಬ ಶಿಕ್ಷಕ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಸಾವಿರಾರು ಮಕ್ಕಳ ಭವಿಷ್ಯ ನಿರ್ನಾಮವಾಗುತ್ತದೆ. ಶಿಕ್ಷಕರು ಭಾಷೆ, ಜ್ಞಾನದಲ್ಲಿ ಅಧ್ಯಯನಶೀಲರಾಗಿ ಕಠಿಣ ಪರಿಶ್ರಮ ಪಟ್ಟಾಗ ಮಾತ್ರ ಮುಂದಿನ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗುತ್ತದೆ. ಸಮಯಪಾಲನೆ, ಕರ್ತವ್ಯನಿಷ್ಠೆ ಬೆಳಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ| ಆರ್‌. ಎಸ್‌.ಹತ್ತಿ, ಡಾ| ಎಂ.ಎಸ್‌.ಪಾಟೀಲ, ಡಾ| ಕಲ್ಪನಾ ದೇಶಪಾಂಡೆ, ಪ್ರೊ| ಎಸ್‌.ವಿ. ಜೂಜಾ, ಪ್ರೊ| ಬಿ.ಎಸ್‌.ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next