Advertisement

ವಿದ್ಯಾರ್ಥಿಗಳು ಬಾಹ್ಯ ಪ್ರಭಾವಕ್ಕೆ ಒಳಗಾಗದಿರಲಿ: ಬಿಷಪ್‌ ಕರೆ

11:34 AM Sep 03, 2018 | Team Udayavani |

ಮಹಾನಗರ: ಮಕ್ಕಳು ಕೂಡ ಬಾಹ್ಯ ಆಮಿಷಗಳಿಗೆ ಬಲಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಮಂಗಳೂರಿನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಹೇಳಿದರು. ಶನಿವಾರ ಮಂಗಳೂರು ಧರ್ಮ ಪ್ರಾಂತ ಅಧೀನದ ಕೆಥೋಲಿಕ್‌ ಶಿಕ್ಷಣ ಮಂಡಳಿಯ ವತಿಯಿಂದ ಬಜ್ಜೋಡಿಯ ಜ್ಯೋತಿ ನಿವಾಸ್‌ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಇದ್ದರೂ ಕೆಲವೊಮ್ಮೆ ಬಾಹ್ಯ ಪ್ರಭಾವಕ್ಕೆ ಒಳಗಾಗಿ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇವೆ. ಈ ಬಗ್ಗೆ ಶಿಕ್ಷಕರು ಮತ್ತು ಹೆತ್ತವರು ಎಚ್ಚರಿಕೆಯಿಂದ ಇರಬೇಕು ಎಂದರು.

ಜೀವನ ಮೌಲ್ಯ ಕಲಿಸಿ
ಶಿಕ್ಷಕರ ಕೆಲಸ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಿ ಫಲಿತಾಂಶ ಪಡೆಯುವುದಕ್ಕೆ ಸೀಮಿತವಾಗಬಾರದು; ಜೀವನ ಮೌಲ್ಯಗಳನ್ನೂ ಕಲಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕೆಥೋಲಿಕ್‌ ಶಿಕ್ಷಣ ಮಂಡಳಿಯ ಅಧ್ಯಕ್ಷರೂ ಆದ ಬಿಷಪ್‌ ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ತಾಲೂಕು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌ ಮಾತನಾಡಿ, ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಶಾಲಾ ಆಡಳಿತದವರು ಎಚ್ಚರಗೊಂಡು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಸಾಮಾನ್ಯ. ಹಾಗಾಗಿ ಈಗ ನಾವು ಶಾಲೆಗಳಿಗೆ ಭೇಟಿ ನೀಡಿದಾಗ ಸ್ವಚ್ಛತೆಯ ಬದಲು ಅಲ್ಲಿನ ಮಕ್ಕಳಿಗೆ ಓದಲು, ಬರೆಯಲು, ಮಾತನಾಡಲು ಬರುತ್ತಿದೆಯೇ, ಅವರ ಯೋಚನ ಶಕ್ತಿ ಹೇಗಿದೆ ಎನ್ನುವುದನ್ನು ಗಮನಿಸುತ್ತಿದ್ದೇವೆ. ಅದರ ಫಲಿತಾಂಶ ಮುಂದಿನ ವರ್ಷ ಸಿಗಬಹುದೆಂಬ ಭರವಸೆ ಇದೆ ಎಂದರು. ಜಿಲ್ಲೆಯಲ್ಲಿ ಕ್ರೈಸ್ತರು ಸೇವಾ ಮನೋಭಾವದಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು, ಇವತ್ತು ದಕ್ಷಿಣ ಕನ್ನಡವು ಬುದ್ಧಿವಂತರ ಜಿಲ್ಲೆ ಎನಿಸಿದ್ದರೆ ಮತ್ತು ಗುಣಮಟ್ಟದ ಶಿಕ್ಷಣ ಇಲ್ಲಿ ಲಭಿಸುತ್ತಿದ್ದರೆ ಅದರ ಹಿರಿಮೆ ಕ್ರೈಸ್ತರಿಗೆ ಸಲ್ಲುತ್ತದೆ ಎಂದರು.

333 ಶಿಕ್ಷಣ ಸಂಸ್ಥೆ, 75,000 ವಿದ್ಯಾರ್ಥಿಗಳು
ಕೆಥೋಲಿಕ್‌ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಆ್ಯಂಟನಿ ಶೇರಾ ಸ್ವಾಗತಿಸಿ, ಮಂಡಳಿಯ ಅಧೀನದಲ್ಲಿ 333 ಶಿಕ್ಷಣ ಸಂಸ್ಥೆಗಳಿದ್ದು, 75,000 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ ಎಂದರು. ನಿವೃತ್ತ ಶಿಕ್ಷಕರ ಪರವಾಗಿ ಶಿರ್ತಾಡಿಯ ಜೆಸಿಂತಾ ಡಿ’ಸೋಜಾ ಮತ್ತು ಮಡಂತ್ಯಾರಿನ ಮಧುಕರ ಮಲ್ಯ ತಮ್ಮ ಅನಿಸಿಕೆಗಳನ್ನು ಹೇಳಿದರು. ಚೇಲೂರು ಸೈಂಟ್‌ ತೋಮಸ್‌ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಲ್ಯಾನ್ಸಿ ಡಿ’ಸೋಜಾ ವಂದಿಸಿದರು. ಮುಖ್ಯ ಶಿಕ್ಷಕಿಯರಾದ ಐರಿನ್‌ ಸಿಕ್ವೇರಾ, ಸುನಿತಾ ಡಿ’ಸೋಜಾ, ಡಾ| ಪ್ರಸಿಲ್ಲಾ ಡಿ’ಸೋಜಾ, ಸಿ| ಅಂತೋನಿ ಮೇರಿ ಮತ್ತು ವಲ್ಸ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗತ ವರ್ಷ ಅಗಲಿದ ಶಾಲಾ ಸಂಚಾಲಕರಿಗೆ ಮತ್ತು ಶಿಕ್ಷಕ/ ಶಿಕ್ಷಕೇತರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಲರಾಯ್‌ ಸೈಂಟ್‌ ಆ್ಯನ್ಸ್‌ ಶಾಲೆಯ ಮುಖ್ಯ ಶಿಕ್ಷಕ ಫಾ| ಪಾವ್ಲ್ ಕ್ರಾಸ್ತಾ ಶ್ರದ್ಧಾಂಜಲಿ ಸಂದೇಶ ವಾಚಿಸಿದರು. 

Advertisement

ಸಮ್ಮಾನ, ಪ್ರತಿಭಾ ಪುರಸ್ಕಾರ 
ಕೆಥೋಲಿಕ್‌ ಶಿಕ್ಷಣ ಮಂಡಳಿಯ ಅಧೀನದ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 2018- 19ರಲ್ಲಿ ನಿವೃತ್ತರಾದ ಮತ್ತು ನಿವೃತ್ತರಾಗಲಿರುವ 41 ಮಂದಿ ಶಿಕ್ಷಕ/ ಶಿಕ್ಷಕಿಯರನ್ನು, ಐವರು ಶಿಕ್ಷಕೇತರರನ್ನು ಸಮ್ಮಾನಿಸಲಾಯಿತು. 2017- 18ನೇ ಸಾಲಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶೇಕಡಾ ನೂರು ಫಲಿತಾಂಶ ಪಡೆದ 18 ಶಾಲೆಗಳ ಮತ್ತು 2 ಪ.ಪೂ. ಕಾಲೇಜುಗಳ ಮುಖ್ಯಸ್ಥರನ್ನು, ಗರಿಷ್ಠ ಫಲಿತಾಂಶ ಗಳಿಸಿದ 14 ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ಬಿಷಪ್‌ ಹುದ್ದೆಯಿಂದ ನಿವೃತ್ತರಾಗಲಿರುವ ರೆ| ಡಾ| ಅಲೋಶಿಯಸ್‌ ಪಾವ್ಲ್ ‘ಸೋಜಾ ಅವರನ್ನು ಮಂಡಳಿ ವತಿಯಿಂದ ಸಮ್ಮಾನಿಸಲಾಯಿತು. ಪಾದುವಾ ಹೈಸ್ಕೂಲು ಮುಖ್ಯ ಶಿಕ್ಷಕ ಫ್ರಾನ್ಸಿಸ್‌ ಡಿ’ಕುನ್ಹಾ ಸಮ್ಮಾನ ಪತ್ರ ವಾಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next