ವಿದ್ಯಾರ್ಥಿ ಎಂಬ ಗಾಳಿಪಟಕ್ಕೆ ಶಿಕ್ಷಕರೇ ಸೂತ್ರದಾರರು.
ಪ್ರಪಂಚದ ಬೆಳಕು, ಕತ್ತಲೆಯ ದಾರಿದೀಪ ಮತ್ತು ಬದುಕಲು ನಮಗೆ ಶಕ್ತಿ ನೀಡುವ ಭರವಸೆ ನಮ್ಮ ಶಿಕ್ಷಕರು.
ಶಿಕ್ಷಕ ಎಂಬ ಪದಕ್ಕೆ ವಿಶೇಷ ಅರ್ಥವಿದೆ. ಗುರು ಎಂದರೆ ಕತ್ತಲೆಯಿಂದ ಬೆಳಕಿಗೆ ತರುವವರು.
ಶಿಕ್ಷಕರು ಶ್ರೇಷ್ಠರು ಎಂಬ ಮಾತಿದೆ. ಪೋಷಕರು ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಶಿಕ್ಷಕರು ಆ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತಾರೆ ಉತ್ತಮವಾದ ಭವಿಷ್ಯವನ್ನ ನಿರ್ಮಿಸುತಾರೆ. ಶಿಕ್ಷಣ ತಜ್ಞರಲ್ಲದೆ, ಉತ್ತಮ ಮಾರ್ಗದರ್ಶನ, ಪ್ರೇರಣೆಯನ್ನು ನೀಡುತ್ತಾರೆ. ಹಸಿ ಮಣ್ಣಿನ ಮುದ್ದೆಯಂತಿರುವ ಮಗುವಿನ ಮನಸ್ಸನ್ನು ತಿದ್ದಿ ತೀಡಿ ಆರೋಗ್ಯ ಪೂರ್ಣ ಪ್ರಜ್ಞೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದ್ದು.
ನಮ್ಮ ಶಿಕ್ಷಣದ ದಿನಗಳಲ್ಲಿ ಅಂದರೆ ಶಾಲಾ ದಿನಗಳಲ್ಲಿ ನಾವು ಆಡಿದ ತುಂಟಾಟ ಶಿಕ್ಷಕರಿಗೆ ನೀಡುತ್ತಿದ್ದ ಕೀಟಲೆಗಳು, ಸಹಪಾಠಿಗಳೊಂದಿಗೆ ಆಡುತ್ತಿದ್ದ ಆಟ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಬಾಲ್ಯದ ದಿನಗಳು ಸುಂದರ. ಶಾಲೆಗೆ ತಡವಾಗಿ ಹೋಗಿ ಬೇರೆ ಬೇರೆ ಕಾರಣ ನೀಡುತ್ತಿದ್ದು, ಶಾಲಾ ಕಾರ್ಯವನ್ನು ಸರಿಯಾಗಿ ಮಾಡದೇ ಶಿಕ್ಷಕರಿಗೆ ನೀಡುತ್ತಿದ್ದ ನೆಪ, ತರಗತಿಯಿಂದ ಹೊರಗೆ ಹಾಕಿಸಿಕೊಂಡು ಬಿಸಿಲಲ್ಲಿ ಓಡುವ ಶಿಕ್ಷೆ, ಹೀಗೆ ಆ ದಿನಗಳಲ್ಲಿ ಶಿಕ್ಷೆಗಳು ಇರುತ್ತಿತ್ತು. ಈ ಎಲ್ಲ ಶಿಕ್ಷೆಗಳು ನಮ್ಮ ಜೀವನದಲ್ಲಿ ಶಿಸ್ತನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದೆ.
ಬಾಲ್ಯದಲ್ಲಿ ಕನಸು ಕಟ್ಟುಕೊಂಡಿದ್ದ ಪುಟ್ಟ ಕಣ್ಣುಗಳಿಗೆ ಶಿಕ್ಷಕರರೇ ರೋಲ್ ಮಾಡೆಲ್ ನಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಶಿಕ್ಷಕರು ವಹಿಸಿಕೊಂಡ ಕಾಳಜಿಯೇ ನಮ್ಮನ್ನು ಇಂದು ಈ ಸಾಧನೆಯ ಶಿಖರವನ್ನೇರಿಸುತ್ತಿರುವುದು. ಓರ್ವ ಶಿಕ್ಷಕ ಮಕ್ಕಳಿಗೆ ಹೇಗೆ ಮಾದರಿಯಾಗುತ್ತಾರೆ ಎಂಬುದಕ್ಕೆ ಡಾ| ರಾಧಾಕೃಷ್ಣ ಅವರೇ ಸಾಕ್ಷಿ. ನಾನು ಶಿಕ್ಷಕರನ್ನ ಶಿಲ್ಪಿಗೆ ಹೋಲಿಸುತ್ತೇನೆ. ಯಾಕೆಂದರೆ ಒಬ್ಬ ಶಿಲ್ಪಿಯು ಒಂದು ಕಲ್ಲನ್ನು ಹೇಗೆ ಉತ್ತಮವಾದ ಶಿಲೆಯಾಗಿ ಮಾಡಿ ಜೀವ ತುಂಬುತ್ತಾನೋ ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳನ್ನ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತಾರೆ.
ನಿಖಿಲಾ, ಸಂತ ಫಿಲೋಮಿನಾ ಕಾಲೇಜು ಮೈಸೂರು