Advertisement

ಸಂತೃಪ್ತಿ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಶಿಕ್ಷಕರು

01:07 PM Mar 29, 2019 | Team Udayavani |

ಚಿಂತಾಮಣಿ: ನಗರದ ಹೊರವಲಯದ ಕಾವಲಗಾನಹಳ್ಳಿಯ ಜೈನ್‌ ಪಬ್ಲಿಕ್‌ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದರ ಪ್ರಯುಕ್ತ ಶಾಲೆಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಸಂತೃಪ್ತಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಶಿಕ್ಷಕರು ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು.

Advertisement

ವರ್ಷವಿಡೀ ಸದಾ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಯೋಜಿಸುತ್ತಾ ಪಾಠ, ಬೋಧನೆಯಲ್ಲೇ ನಿರತರಾಗುತ್ತಿದ್ದ ಶಿಕ್ಷಕರಿಗಾಗಿ ಶಾಲೆಯ ಆಡಳಿತ ಮಂಡಳಿಯು ಸಂತೃಪ್ತಿ ಎಂಬ ವಿನೂತನ ಮನರಂಜನಾ ಕಾರ್ಯಕ್ರಮ ರೂಪಿಸಿ ಶಿಕ್ಷಕರಿಗಾಗಿ ಚಿತ್ರಕಲೆ, ಗಾಯನ, ಪಿಕ್‌ ಆಂಡ್‌ ಆಕ್ಟ್, ನೃತ್ಯ, ಯೋಗ, ಮಿಮಿಕ್ರಿ, ಪೇಪರ್‌ ಕ್ರಾಫ್ಟ್, ಸೇರಿದಂತೆ ಹತ್ತು ಹಲವು ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದ್ದರು. ಸ್ಪರ್ಧೆಗಳಲ್ಲಿ ತಾವೇನು ಕಡಿಮೆ ಎಂಬಂತೆ ಶಿಕ್ಷಕ ಶಿಕ್ಷಕಿಯರು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಎನ್‌.ಮಂಜುನಾಥ ಮಾತನಾಡಿ, 2018-19ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಶಾಲೆಯ ಎಲ್ಲಾ ಬೋಧಕ ಸಿಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು. ಸದಾ ಬೋಧನೆಯಲ್ಲಿ ನಿರತರಾಗಿರುತ್ತಿದ್ದ ಶಿಕ್ಷಕರಿಗಾಗಿ ಈ ವಿಶೇಷ ಮನರಂಜನಾ ಕಾರ್ಯಕ್ರಮ ರೂಪಿಸಿರುವುದಾಗಿ ತಿಳಿಸಿದರು.

ಸಂತೃಪ್ತಿ: ಶಿಕ್ಷಕರು ಸಮಾಜದ ನಿರ್ಮಾಪಕರಾಗಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವವರಲ್ಲಿ ಪ್ರಮುಖ ಪಾತ್ರ ಶಿಕ್ಷಕರದ್ದೇ ಆಗಿದೆ. ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಯೇ ಶ್ರೇಷ್ಠವಾಗಿದ್ದು, ಶಿಕ್ಷಕ ವೃತ್ತಿಯಲ್ಲಿ ಸಿಗುವಷ್ಟು ಸಂತೃಪ್ತಿ ಬೇರೆ ವೃತ್ತಿಗಳಲ್ಲಿ ಸಿಗುವುದು ಅಪರೂಪ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತು ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಉತ್ತಮ ಫ‌ಲಿತಾಂಶ ದೊರೆಯುತ್ತದೆ ಎಂದರು.

ಕೃತಜ್ಞತೆ: ಈ ಸಂದರ್ಭದಲ್ಲಿ ಕೆಲವು ಶಿಕ್ಷಕರು ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಜೈನ್‌ ಶಾಲೆಯ ಹಾಗೂ ಶಾಲೆಯ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರಲ್ಲದೆ, ಸಂತೃಪ್ತಿ ಕಾರ್ಯಕ್ರಮ ರೂಪಿಸಿ ಎಲ್ಲಾ ಶಿಕ್ಷಕರ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಿದ ಶಾಲೆಯ ಆಡಳಿತ ಮಂಡಳಿಯವರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಶಿಕ್ಷಕರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಗುಂಪುಗಳಿಗೆ ಸಿಂಥಾಲ್‌, ಲಕ್ಸ್‌, ಲೈಫ್ ಬಾಯ್‌, ಸಂತೂರ್‌ ಸಾಬೂನುಗಳ ಹೆಸರು ನೀಡಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಿಂಥಾಲ್‌ ತಂಡವು ಪ್ರಥಮ ಸ್ಥಾನ ಪಡೆಯಿತು. ಈ ತಂಡಕ್ಕೆ ಶಾಲೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. ಶಾಲೆಯ ಮುಖ್ಯಸ್ಥರಾದ ಎಂ.ಪಾರ್ಥಸಾರಥಿ ಉಪಸ್ಥಿತರಿದ್ದರು.

ಶಾಲೆಯ ಪಠ್ಯೇತರ ಶಿಕ್ಷಕರಾದ ಸಿ.ಎ.ಮಣಿಕುಮಾರ್‌, ಎಚ್‌.ಎಸ್‌.ಅಶೋಕ್‌, ಎ.ವಿ.ಮಂಜುನಾಥ, ರಾಜೇಶ್‌, ಲಾವಣ್ಯ, ಗೋವಿಂದ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next