ರಾಯಚೂರು: ಯಾರಿಂದಲೂ ಕದಿಯಲು ಸಾಧ್ಯವಾಗದ ವಿದ್ಯೆ ಎಂಬ ಸಂಪತ್ತನ್ನು ಧಾರೆ ಎರೆಯುವ ಶಿಕ್ಷಕರು ನಿಜಕ್ಕೂ ಶೈಕ್ಷಣಿಕ ಕ್ಷೇತ್ರದ ಋಷಿಗಳಿದ್ದಂತೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಸೋಮವಾರ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂವಾದ, ಗುರುಸಾರ್ವಭೌಮ ಪ್ರಶಸ್ತಿ ಪ್ರದಾನ ಮತ್ತು ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರ ವೃತ್ತಿ ಪರಮಶ್ರೇಷ್ಠ ಕಾಯಕ. ತಾವು ಮೊದಲು ಕಲಿತು ಆಮೇಲೆ ಪರರಿಗೆ ಹೇಳುವುದು ನಿಜಕ್ಕೂ ದೊಡ್ಡ ಕೆಲಸ. ಬೋಧಕರು ಮೌಲ್ಯಯುತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.
ಬೆಳ್ಳೇರಿಯ ಚಿದಾನಂದ ಮಠದ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಮೌಲ್ಯ ರೂಢಿಸಿಕೊಳ್ಳಬೇಕು. ನೈತಿಕತೆ ಕೊರತೆಯಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಶಿಕ್ಷಕರು ಮಕ್ಕಳಲ್ಲಿ ನೈತಿಕತೆ ತುಂಬುವ ಕೆಲಸ ಮಾಡಬೇಕು. ಇಂದು ರೈತನೋ, ಕೂಲಿಕಾರನೋ ಭ್ರಷ್ಟಾಚಾರ ಮಾಡುತ್ತಿಲ್ಲ. ದೇಶ ಭ್ರಷ್ಟವಾಗಲು ಶಿಕ್ಷಿತರೇ ಕಾರಣಾಗುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಪ್ರಾಮಾಣಿಕತೆ, ನೈತಿಕತೆ ಕಲಿಸದ ಹೊರತು ಭ್ರಷ್ಟಾಚಾರ ಕಡಿಮೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಮಖಂಡಿಯ ಸಂಪನ್ಮೂಲ ವ್ಯಕ್ತಿ ಆನಂದ ಕೆ. ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಆಯ್ದ ಹತ್ತು ಜನ ಶಿಕ್ಷಕರಿಗೆ ಗುರುಸಾರ್ವಭೌಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಕಾಸ ಅಕಾಡೆಮಿಯ ಲೀಲಾ ಕಾರಟಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಉಪನಿರ್ದೇಶಕ ಟಿ.ನಾರಾಯಣಗೌಡ ಮಾತನಾಡಿದರು. ಡಯಟ್ ಉಪನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಣಾಧಿಕಾರಿ ಆರ್.ಇಂದಿರಾ, ಬಿಇಒ ಚಂದ್ರಶೇಖರ ದೊಡ್ಡಮನಿ, ಸಂಘದ ರಾಜ್ಯ ಸಹ ಕಾರ್ಯದರ್ಶಿ ಮಹಾದೇವಪ್ಪ, ಜಿಲ್ಲಾಧ್ಯಕ್ಷ ಸೈಯ್ಯದ್ ಸಿರಾಜ್ ಹುಸೇನ್, ತಾಲೂಕು ಅಧ್ಯಕ್ಷ ಮೋಹಿನುಲ್ ಹಕ್ ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಯಂಕಪ್ಪ ಫಿರಂಗಿ ಸೇರಿ ನೂರಾರು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಹಣ ನೀಡಿದರೆ ವ್ಯಕ್ತಿ ಕ್ಷಣಾರ್ಧದಲ್ಲೇ ಸಿರಿವಂತನಾಗಬಲ್ಲ. ಆದರೆ, ಅದು ಕ್ಷಣಿಕ. ವಿದ್ಯೆಯನ್ನು ಕ್ಷಣಾರ್ಧದಲ್ಲಿ ನೀಡಲು ಬರುವುದಿಲ್ಲ. ಅದು ಒಮ್ಮೆ ಸಿಕ್ಕರೆ ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅಂತಹ ಮಹಾನ್ ವಿದ್ಯೆಯನ್ನು ಧಾರೆ ಎರೆಯುವ ಕಾಯಕ ಮಾಡುವ ಗುರುಗಳು ಸಾಕ್ಷಾಥ್ ತಪಸ್ವಿಗಳಾಗಿದ್ದಾರೆ.
•ಸಿದ್ಧೇಶ್ವರ ಶ್ರೀ ವಿಜಯಪುರ ಜ್ಞಾನ ಯೋಗಾಶ್ರಮ,