ಜೀವ ಮುಖ್ಯವೇ? ಜೀವನ ಮುಖ್ಯವೇ? ಬಹುಶಃ ಈ ಪ್ರಶ್ನೆ ಹುಟ್ಟಿಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ನಡೆದ ಲಾಕ್ ಡೌನ್ ಸಂಧರ್ಭದಲ್ಲಿಯೇ. ಕೋವಿಡ್ ಸೋಂಕಿತರ ಸಂಖ್ಯೆ ಅಂಬೆಗಾಲು ಇಡುತ್ತಿದ್ದಾಗ ಜೀವ ಇದ್ದರೇನೆ ಜೀವನ ಎಂದು ಸಂಪೂರ್ಣ ದೇಶವೇ ಲಾಕ್ ಡೌನ್ ಆದಾಗ ಕೆಲಸವಿಲ್ಲದೆ ಪರದಾಡಿದವರಲ್ಲಿ ಶಿಕ್ಷಕ ವರ್ಗವೂ ಒಂದು.
ಬರಬರುತ್ತಾ ಆರ್ಥಿಕ ಸ್ಥಿತಿ ಹದಗೆಡುವುದನ್ನು ಕಂಡ ಸರಕಾರ ಇಲ್ಲ ಇಲ್ಲಾ ಜೀವಕ್ಕಿಂತ ಜೀವನ ಮುಖ್ಯ ಎಂದು ಲಾಕ್ ಡೌನ್ ಸಡಿಲಿಕೆ ಮಾಡಿದಂತಹ ಸಂದರ್ಭದಲ್ಲಿಯು ಸಹ ಕೆಲಸವಿಲ್ಲದೆ ಒದ್ದಾಡಿದವರೂ ಶಿಕ್ಷಕರೇ.
ಆದ್ರೆ ಇಲ್ಲಿ ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿಯದೆ ತನ್ನ ಶಿಷ್ಯನ ಜೀವನಕ್ಕೆ ಉತ್ತಮ ಭವಿಷ್ಯ ನಿರ್ಮಾನ ಮಾಡುವ ಶಿಲ್ಪಿಗಳಂತೆ ದುಡಿಯುತ್ತಿರುವ ಶಿಕ್ಷಕರ ತ್ಯಾಗ ಪ್ರಜ್ವಲಿಸುವ ದೀಪದ ತಳಹದಿಯ ಕತ್ತಲಿನಂತಾಗಿದೆ ಅಲ್ಲವೆ?
ಅಯ್ಯೋ! ಶಾಲೆಗಳು ತೆರೆಯುವಂತ್ತಿಲ್ಲ ಮಕ್ಕಳ ಭವಿಷ್ಯ ಮುಂದೇನು? ಎಂದು ಮಕ್ಕಳ ಹೆತ್ತವರಿಗಿಂತಲೂ ಹೆಚ್ಚಾಗಿ ಚಿಂತಿಸಿದವರೂ ನಮ್ಮ ಶಿಕ್ಷಕರೇ. ” ಜೀವವೂ ಮುಖ್ಯ ಜೀವನವೂ ಮುಖ್ಯ” ಎಂದು ಮಕ್ಕಳ ಶಿಕ್ಷಣದ ಜೊತೆ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿವಹಿಸಿದ ಮಾತೆಯರು ಎಂದರೆ ತಪ್ಪಾಗಲಾರದು. ಹಾಗಾಗಿ ಬಾಗಿದ ಸಸಿಗೆ ಆಧಾರ ಕೋಲಿನಂತೆ ನಿಂತ ಶಿಕ್ಷಕರು, ಒನ್ ಲೈನ್ ಶಿಕ್ಷಣದ ಮೂಲಕ ಮಕ್ಕಳು ಮನೆಯಲ್ಲೇ ಕುಳಿತು ಪಾಠ-ಪಠ್ಯಗಳನ್ನು ಕಲಿಯಲು ಅನುಕೂಲವಾಗುವಂತೆ ಹಾಡಿದರು, ಕುಣಿದರು, ಕಥೆ ಹೇಳಿದರು ವೀಡಿಯೋ ತರಬೇತಿ ಹೀಗೆ ಎಲ್ಲಾ ವಿಧಧ ಪ್ರಯತ್ನವನ್ನು ಮಾಡಿದರೂ ಸಹ ಎಲ್ಲಾ ವರ್ಗದ ಮಕ್ಕಳಿಗೂ ತಲುಪಿಸಲು ಸಾಧ್ಯವಿಲ್ಲ ಎಂದು ಮಕ್ಕಳು ಇರುವಲ್ಲಿಗೆ ತೆರಳಿ ಸಾಧ್ಯವಾಗುವಷ್ಟರ ಮಟ್ಟಿಗೆ ಮಕ್ಕಳಿಗೆ ಪಠ್ಯ ವಿಷಯವನ್ನು ಅರ್ಥೈಸಲು ಪಟ್ಟ ಪಯತ್ನ ” ಓರೆಗಲ್ಲಿಗೆ ಗಂಧ ತೇಯಿದ್ದು ಸುಂಗಂಧ ಹೊರ ತೆಗೆದಂತೆಯೆ ಸರಿ”. ತನ್ನ ಹೊತ್ತಿಗೆಯ ತುಂಬಾ ಜ್ಞಾನದ ಜೇನನ್ನು ಹೊತ್ತೊಯಿದ ಶಿಕ್ಷಕನ ಮುಖದಲ್ಲಿ ಅದೇ ಮಂದಹಾಸ ಕಣ್ಣಲ್ಲಿ ಅದೇ ಉತ್ಸಾಹ.
ತಾಯಿ ಮಗುವಿನ ಬಾಂದವ್ಯ ಎಷ್ಟು ಪವಿತ್ರವೋ ಹಾಗೆ ಗುರು-ಶಿಷ್ಯರ ಬಂಧವು ಅಷ್ಟೇ ಮಹತ್ವ ಪೂರ್ಣವಾದುದು ಪ್ರತಿಫಲ ಅಪೇಕ್ಷೆಯಿಲ್ಲದೆ ಮಕ್ಕಳ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುವ ಒಂದು ಜೀವ ಮಕ್ಕಳ ಹೆತ್ತವರಾದರೆ ಮತ್ತೊಂದು ಈ ಶಿಕ್ಷಕರೇ.
ನಿಶಾನ್ ಅಂಚನ್
ಸಮಾಜ ವಿಜ್ಞಾನ ಶಿಕ್ಷಕ. ಹೋಲಿ ಫ್ಯಾಮಿಲಿ ಹೈ ಸ್ಕೂಲ್ ಬಜಪೆ. ಕಾವೂರು ಮುಲ್ಲಕಾಡು