Advertisement

ಶಾಲೆಗಳಲ್ಲಿ ಬಯೋಮೆಟ್ರಿಕ್‌ ಹಾಜರಿಗೆ ಶಿಕ್ಷಕರ ಅಪಸ್ವರ

12:54 PM Sep 02, 2017 | Team Udayavani |

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬಯೋಮೆಟ್ರಿಕ್‌ ಪದ್ಧತಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದು, ಶಿಕ್ಷಕರ ವಲಯ ವಿರೋಧಿಸಿದೆ. ಶಿಕ್ಷಕರನ್ನು ಶಾಲೆಯಲ್ಲಿಯೇ ಉಳಿಸುವ ದಿಸೆಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಆದೇಶ ಮಾಡಿದ್ದಾರೆ.

Advertisement

ಅನೇಕ ಶಿಕ್ಷಕರು ಶಾಲೆಯ ಅವಧಿಯಲ್ಲಿ ಶಾಲೆಯಲ್ಲಿ ಹಾಜರಿರುವುದಿಲ್ಲ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಂಡಿದ್ದಾರೆ. ಸರಕಾರಿ ಶಾಲೆಗಳಲ್ಲಿ ಸಮರ್ಪಕ ಶಿಕ್ಷಣ ನೀಡುತ್ತಿಲ್ಲ. ಇದರಿಂದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಫ‌ಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ ಎಂಬ ಬಗ್ಗೆ ಜಿಲ್ಲಾ ಪಂಚಾಯತ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿತ್ತು.

ಸರಕಾರಿ ಶಾಲೆಗಳ ಮಕ್ಕಳ ಪ್ರಗತಿ ಕುಸಿಯುತ್ತಿರುವ ಕುರಿತು ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆಯನ್ನು ಅರಿತ ಜಿ.ಪಂ. ಅಧ್ಯಕ್ಷರು ಬಯೋಮೆಟ್ರಿಕ್‌ ಅಳವಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. 

ಡಿಡಿಪಿಐ ಸುತ್ತೋಲೆ: ಕಳೆದ ಆಗಸ್ಟ್‌ 26ರಂದು ಡಿಡಿಪಿಐ ಅವರು 2017-18ನೇ ಸಾಲಿನಲ್ಲಿ ಎಲ್ಲ ಶಾಲೆಗಳಲ್ಲೂ ಬಯೋಮೆಟ್ರಿಕ್‌ ಅಳವಡಿಕೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯತ ಸಭೆಯಲ್ಲಿ ಸೂಚಿಸಿದ್ದರನ್ವಯ ಶಾಲಾ ಅನುದಾನ, ನಿರ್ವಹಣೆ ಅನುದಾನ ಅಥವಾ ಲಭ್ಯವಿರುವ ಸಂಚಿತ ನಿಧಿಯನ್ನು ಬಳಸಬೇಕು.

ಇಲ್ಲವೇ ಸಮುದಾಯದವರಿಂದ ದೇಣಿಗೆ ಪಡೆದು ಕಡ್ಡಾಯವಾಗಿ ಅಳವಡಿಸುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೇ ಶಾಲೆಗಳ ಮುಖ್ಯೋಪಾಧ್ಯಾಯರು ಬಯೋಮೆಟ್ರಿಕ್‌ ಅಳವಡಿಸಿದ ಬಗ್ಗೆ ವರದಿಯನ್ನು ಕೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕೆಂದು ಸೂಚಿಸಲಾಗಿದೆ. 

Advertisement

ಶಿಕ್ಷಕರ ವಿರೋಧ: ಆದರೆ ಬಯೋಮೆಟ್ರಿಕ್‌ ಅಳವಡಿಸುತ್ತಿರುವುದಕ್ಕೆ ಶಿಕ್ಷಕರ ವಲಯ ವಿರೋಧ ವ್ಯಕ್ತಪಡಿಸಿದೆ. ಇದು ಶಿಕ್ಷಕರ ವಿಶ್ವಾಸದ ಪ್ರಶ್ನೆಯಾಗಿದೆ. ಕೆಲ ಶಿಕ್ಷಕರು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಎಲ್ಲ ಶಿಕ್ಷಕರ ಮೇಲೆ ಸಂದೇಹಪಡುವುದು ಸರಿಯಲ್ಲ.

ಬಯೋಮೆಟ್ರಿಕ್‌ ಅಳವಡಿಕೆಯಿಂದ ಪ್ರಗತಿ ಸಾಧ್ಯವಿಲ್ಲ. ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಆಸಕ್ತಿಯಿಲ್ಲದವರು ಹೇಗಾದರೂ ಮಾಡಿ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆ. ಅದರ ಬದಲು ಶಾಲಾ ಕಟ್ಟಡ, ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದು ಶಿಕ್ಷಕರ ಅಭಿಪ್ರಾಯ.  

Advertisement

Udayavani is now on Telegram. Click here to join our channel and stay updated with the latest news.

Next