Advertisement

ಶಿಕ್ಷಕರು ಯುವ ಸಮುದಾಯ ನಿರ್ಮಿಸುವ ಶಿಲ್ಪಿಗಳು

12:36 PM Sep 06, 2017 | |

ಮೈಸೂರು: ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಯುವ ಸಮುದಾಯವನ್ನು ನಿರ್ಮಿಸುವ ಶಿಲ್ಪಿಗಳಾಗಬೇಕು ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಶಿಕ್ಷಕರ ಮತ್ತು ಮಕ್ಕಳ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ  ಮಾತನಾಡಿದರು.

ಶಿಕ್ಷಕರು ಸಮಾಜ ಕಟ್ಟುವ ಆಧಾರ ಸ್ತಂ¸‌ಗಳು. ಯುವ ಸಮುದಾಯಕ್ಕೆ ಆದರ್ಶ ಬದುಕು ರೂಪಿಸುವ ಶಿಲ್ಪಿಗಳಾಗಬೇಕು. ಕಲಿತ ವಿದ್ಯೆಯನ್ನು ಯಾರೂ ನಾಶಪಡಿಸಲಾಗಲ್ಲ. ಇತ್ತೀಚಿನ ದಿನಗಳಲ್ಲಿ ಹೂಕಟ್ಟಿ ಮಾರಿ, ಆಟೋ ಓಡಿಸಿ ಜೀವನ ಸಾಗಿಸುವವರ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ನಮ್ಮ ಶಿಕ್ಷಕರ ಶೈಕ್ಷಣಿಕ ಶಕ್ತಿಯನ್ನು ತೋರಿಸುತ್ತದೆ ಎಂದರು.

ಸವಾಲು: ವಿದ್ಯಾರ್ಥಿಯ ಆಸಕ್ತಿ ಗುರುತಿಸಿ, ಕಲಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ರಾಧಾಕೃಷ್ಣನ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ಶಿಕ್ಷಕರು ರಾಧಾಕೃಷ್ಣನ್‌ ಅವರಿಗೆ ಗೌರವ ಸಲ್ಲಿಸಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ 18 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದರೂ ಇನ್ನೂ ಅನೇಕ ಸವಾಲುಗಳಿವೆ. ಹಂತ ಹಂತವಾಗಿ ಈ ಎಲ್ಲಾ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದರು.

ಆತ್ಮಾವಲೋಕನ: ಮುಖ್ಯಭಾಷಣ ಮಾಡಿದ ಹಿರಿಯ ರಂಗಕರ್ಮಿ ಡಾ.ಎಚ್‌.ಕೆ.ರಾಮನಾಥ್‌, ಸರ್ವಪಲ್ಲಿ ರಾಧಾಕೃಷ್ಣನ್‌ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಗುರು ಯಾರು ಎಂಬ ಪ್ರಶ್ನೆ ಬಂದಾಗ ಬಿ.ಎಂ.ಶ್ರೀಕಂಠಯ್ಯ ಅವರಂತವರೇ, ನಾನು ಗುರುವಲ್ಲ ಸಂಬಳದ ಮೇಷ್ಟ್ರು ಎನ್ನುತ್ತಿದ್ದರು, ಹೀಗಾಗಿ ಇಂದಿನ ಶಿಕ್ಷಕರು ಗುರು ಅನಿಸಿಕೊಳ್ಳಲು ನಾವು ಅರ್ಹರೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಶಿಕ್ಷಕ ರಾಷ್ಟ್ರದ ಶಿಲ್ಪಿ ಇದ್ದಂತೆ.

Advertisement

ಆದರ್ಶ ಶಿಕ್ಷಕರಾದವರು ನಿರಂತರ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಬದುಕಿಗೆ ಅಂಕಗಳಿಕೆಯೇ ಮುಖ್ಯವಲ್ಲ. ವ್ಯಕ್ತಿತ್ವವಿಕಾಸ ಮುಖ್ಯ,ಶಿಕ್ಷಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಜತೆಗೆ ಯಾವುದಾದರೊಂದು ಕಲೆಯಲ್ಲಿ ಮಕ್ಕಳಿಗೆ ಪಾಂಡಿತ್ಯ ಕಲಿಸಿ ಎಂದು ಕಿವಿಮಾತು ಹೇಳಿದರು.

ಇಳಿಮುಖ: ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ರಾಜ್ಯದಲ್ಲಿ ಮೈಸೂರು ಜಿಲ್ಲೆಯವರೇ ಶಿಕ್ಷಣ ಸಚಿವರಿದ್ದರೂ ಶಿಕ್ಷಕರ ಸಮಸ್ಯೆಗೆ ಓಗೊಡುತ್ತಿಲ್ಲ. ಜಿಲ್ಲೆಯಲ್ಲಿ ಪಲಿತಾಂಶ ಇಳಿಮುಖವಾಗುತ್ತಿದೆ. ಇತ್ತ ಗಮನಹರಿಸಿ ಉತ್ತಮ ಫ‌ಲಿತಾಂಶಕ್ಕೆ ಶ್ರಮಿಸಬೇಕಿದೆ ಎಂದರು.

ಸನ್ಮಾನ: ಇದೇ ವೇಳೆ ಡಯಟ್‌ನಿಂದ ಹೊರತರಲಾಗಿರುವ ಗುರು ಚೇತನ ತರಬೇತಿ ಸಾಹಿತ್ಯ ಮತ್ತು ಲಾಂಛನವನ್ನು ಸಚಿವ ಮಹದೇವಪ್ಪ ಅನಾವರಣ ಮಾಡಿದರು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ವಿಭಾಗದ ತಲಾ 9 ಶಿಕ್ಷಕರು ಹಾಗೂ 86 ಮಂದಿ ನಿವೃತ್ತ ಶಿಕ್ಷಕರನ್ನು ಇದೇ ಸಂದ¸‌ìದಲ್ಲಿ ಸನ್ಮಾನಿಸಲಾಯಿತು.

ಶಾಸಕ ಎಂ.ಕೆ.ಸೋಮಶೇಖರ್‌, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೇಯರ್‌ ಎಂ.ಜೆ.ರವಿಕುಮಾರ್‌, ಡಿಡಿಪಿಐ ಡಾ.ಬಿ.ಕೆ.ಎಸ್‌.ವರ್ಧನ್‌ ಮಾತನಾಡಿದರು. ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ , ಉಪ ಮೇಯರ್‌ ರತ್ನಾ, ನಿಗಮ-ಮಂಡಳಿ ಅಧ್ಯಕ್ಷರಾದ ಎಚ್‌.ಎ.ವೆಂಕಟೇಶ್‌, ಬಿ.ಸಿದ್ದರಾಜು, ಜಿಲ್ಲಾಧಿಕಾರಿ ಡಿ.ರಂದೀಪ್‌, ಜಿಪಂ ಸಿಇಒ ಪಿ.ಶಿವಶಂಕರ್‌ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೇಯರ್‌ಗೆ ಬೈದ ಶಿಕ್ಷಕಿ: ಮೈಸೂರು ಮಹಾ ನಗರಪಾಲಿಕೆ ಮೇಯರ್‌ ಎಂ.ಜೆ.ರವಿಕುಮಾರ್‌, ತಮ್ಮ ಭಾಷಣದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಮನೆಪಾಠ ಮಾಡುವುದನ್ನು ಬಿಟ್ಟು ಶಾಲೆಯಲ್ಲೇ ಕಲಿಸಿದರೆ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುತ್ತಿದ್ದಂತೆ ಸಭಿಕರ ಮಧ್ಯದಿಂದ ಎದ್ದುನಿಂತ ಶಿಕ್ಷಕಿಯೊಬ್ಬರು, ಏರಿದ ಧ್ವನಿಯಲ್ಲಿ ಮೇಯರ್‌ಗೆ ಬಾಯಿಗೆ ಬಂದಂತೆ ಬೈಯತೊಡಗಿದರು. ಕೂಡಲೇ ಶಿಕ್ಷಕರ ಸಂಘದ ಪ್ರತಿನಿಧಿಗಳು ಆ ಶಿಕ್ಷಕಿಯನ್ನು ಸಭಾಂಗಣದಿಂದ ಹೊರಗೆ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next