Advertisement

ಟಿಇಟಿ ಪಾಸಾದರಷ್ಟೇ ಶಿಕ್ಷಕರ ನೇಮಕ!

10:54 AM Jul 15, 2017 | Team Udayavani |

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ತೇರ್ಗಡೆಯಾದ ಶಿಕ್ಷಕರನ್ನು ಮಾತ್ರ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ.

Advertisement

ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಫ‌ಲಿತಾಂಶ ಇಳಿಮುಖವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಶಾಲಾ-ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯೋನ್ಮುಖವಾಗಿರುವ ಪಾಲಿಕೆಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಟಿಇಟಿ ಅರ್ಹತೆ ಗಳಿಸಿದ ಶಿಕ್ಷಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಾಲಿಕೆಯ ಪ್ರೌಢಶಾಲೆಗಳು ಹಾಗೂ ಪಿಯುಸಿ ಕಾಲೇಜುಗಳು ಶೇ.48 ಫ‌ಲಿತಾಂಶ ಪಡೆದಿವೆ. ಪಾಲಿಕೆಯ ಶಾಲಾ – ಕಾಲೇಜುಗಳಲ್ಲಿ ನುರಿತ ಶಿಕ್ಷಕರ ಕೊರತೆಯಿರುವುದರಿಂದ ಉತ್ತಮ ಫ‌ಲಿತಾಂಶ ಬರುತ್ತಿಲ್ಲ ಎಂದ ಆರೋಪವಿದ್ದು, ಆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಟಿಇಟಿ, ಬಿ.ಇಡಿ ಹಾಗೂ ಎನ್‌ಇಟಿ ಅರ್ಹತೆ ಪಡೆದವರನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕಾರಿಗಳು  ಮುಂದಾಗಿದ್ದಾರೆ.

ಇರುವುದು 205 ಶಿಕ್ಷಕರು: ಪಾಲಿಕೆಯ ವ್ಯಾಪ್ತಿಯಲ್ಲಿ 153 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 12 ಪಿಯುಸಿ ಕಾಲೇಜುಗಳು ಮತ್ತು 4 ಪ್ರಥಮ ದರ್ಜೆ ಕಾಲೇಜುಗಳಿವೆ. ಪಾಲಿಕೆಯ ಎಲ್ಲ ಶಾಲಾ – ಕಾಲೇಜುಗಳಿಗೆ 780 ಶಿಕ್ಷಕ ಹುದ್ದೆಗಳಿದ್ದು, ಸದ್ಯ 205 ಮಂದಿ ಮಾತ್ರ ಕಾಯಂ ಶಿಕ್ಷಕರಾಗಿದ್ದರೆ. ಉಳಿದಂತೆ 531 ಶಿಕ್ಷಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.

ಹಲವು ವರ್ಷಗಳಿಂದಲೂ ಹೊರ ಗುತ್ತಿಗೆ ಆಧಾರದಲ್ಲಿಯೇ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ, ಶಿಕ್ಷಕರ ನೇಮಕಕ್ಕೆ ಯಾವುದೇ ಮಾನದಂಡಗಳನ್ನು ವಿಧಿಸಿಲ್ಲ. ಪರಿಣಾಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಪ್ರಸಕ್ತ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವವರಿಗೆ ಹಲವು ಮಾನದಂಡಗಳನ್ನು ವಿಧಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ವೇತನ ಹೆಚ್ಚಳ: ಬಿಬಿಎಂಪಿಯ ಶಾಲಾ ಮತ್ತು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಶಿಕ್ಷಕರ ನೇಮಿಸಿಕೊಳ್ಳುವ ವೇಳೆ ಅವರಿಗೆ ಮಾನದಂಡಗಳನ್ನು ವಿಧಿಸುವುದರೊಂದಿಗೆ, ಹೆಚ್ಚಿನ ವೇತನವನ್ನು ನಿಗದಿಪಡಿಸುವ ಕುರಿತು ಪಾಲಿಕೆಯಲ್ಲಿರುವ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಮಿತಿ ನಿರ್ಧರಿಸಿದೆ. 

ಶಿಕ್ಷಕರು ಪಡೆಯುತ್ತಿರುವ ವೇತನ ವಿವರ
-ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರು 8,150 ರೂ.
-ಪಿಯುಸಿ ಉಪನ್ಯಾಸಕರು 10,000 ರೂ.
-ಪದವಿ ಉಪನ್ಯಾಸಕರು 12,000 ರೂ. (ಪಿಎಫ್ ಹಾಗೂ ಇಎಸ್‌ಐ ಕಡಿತದ ನಂತರ ಬರುವ ವೇತನ)

ಶಿಕ್ಷಕರ ನೇಮಕಕ್ಕೆ ಉದ್ದೇಶಿತ ಅರ್ಹತೆ
-ಪ್ರಾಥಮಿಕ. ಪ್ರೌಢ ಶಾಲೆ ಶಿಕ್ಷಕರು ಟಿಇಟಿ
-ಪಿಯುಸಿ ಉಪನ್ಯಾಸಕರು ಎಂ.ಎ, ಬಿ.ಇಡಿ
-ಪದವಿ ಉಪನ್ಯಾಸಕರು  ಎನ್‌ಇಟಿ, ಸ್ಲೆಟ್‌

ಪಾಲಿಕೆಯ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಶಿಕ್ಷಕರ ನೇಮಕದಲ್ಲಿ ಮಾನದಂಡಗಳನ್ನು ವಿಧಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next