ಕಾನ್ಪುರ: ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಶಿಕ್ಷಕನೊಬ್ಬ ತಮ್ಮ ಪಾಠ ಕೇಳುವ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದಿರುವ ಘಟನೆ ಕನೌಜ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
47 ವರ್ಷದ ಶಿಕ್ಷಕ 13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರವನ್ನು ಬರೆದು, ಅದನ್ನು ಓದಿದ ಬಳಿಕ ಹರಿದು ಹಾಕು ಎಂದಿದ್ದಾರೆ. ಶಿಕ್ಷಕನ ಈ ಪ್ರೇಮ ಪತ್ರವನ್ನು ಓದಿದಿ ಬಳಿಕ ಅದನ್ನು ವಿದ್ಯಾರ್ಥಿನಿ ತಮ್ಮ ಪೋಷಕರಿಗೆ ತೋರಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಠಾಣೆಗೆ ಹೋಗುವ ಮೊದಲು ಪೋಷಕರು ಶಿಕ್ಷಕನ ಬಳಿ ಹೋಗಿ, ಈ ರೀತಿಯ ವರ್ತನೆಗೆ ಕ್ಷಮೆ ಕೇಳಿ ಎಂದಿದಾರೆ. ಆದರೆ ಶಿಕ್ಷಕ ಕ್ಷಮೆ ಕೇಳದೆ ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ಪೊಲೀಸರ ಬಳಿ ಹೇಳಿದ್ದಾರೆ.
ಇದನ್ನೂ ಓದಿ: ಸುಲ್ತಾನ್‌ಪುರಿ ಘಟನೆಯಲ್ಲಿ ಮೃತಪಟ್ಟ ಯುವತಿ ಕುಟುಂಬಕ್ಕೆ ಆರ್ಥಿಕ ಸಹಾಯ ದಾನ ನೀಡಿದ ಶಾರುಖ್ ಖಾನ್ ಎನ್ ಜಿಒ
ಪತ್ರದಲ್ಲಿ ಶಿಕ್ಷಕ ವಿದ್ಯಾರ್ಥಿನಿಯ ಹೆಸರು ಬರೆದು, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಚಳಿಗಾಲದ ರಜಾ ದಿನದಲ್ಲಿ ಮಿಸ್ ಮಾಡಿಕೊಳ್ಳುತ್ತೇನೆ. ನಿನಗೆ ಸಮಯ ಸಿಕ್ಕರೆ ನನಗೆ ಕಾಲ್ ಮಾಡು, ರಜೆಯ ಒಂದು ದಿನ ಮೊದಲು ನನ್ನನು ಭೇಟಿಯಾಗು, ನಿನ್ನನು ಯಾವಾಗಲೂ ಪ್ರೀತಿಸುತ್ತೇನೆ. ಇದನ್ನು ಓದಿದ ಮೇಲೆ ಹರಿದು ಹಾಕು, ಯಾರಿಗೂ ಈ ಪತ್ರ ತೋರಿಸಬೇಡ ಎಂದು ಪತ್ರದಲ್ಲಿ ಶಿಕ್ಷಕ ಬರೆದಿದ್ದಾರೆ.
ಈ ಕುರಿತು ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕರ ಯೂನಿಯನ್ ಅಧ್ಯಕ್ಷ ಮಾತಾನಾಡಿ, ಶಿಕ್ಷಕನ ತಪ್ಪು ಸಾಬೀತಾದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.