Advertisement

48 ವರ್ಷಗಳ ಹಿಂದೆ ಕಲಿಸಿದ ಗುರುವನ್ನು ಹುಡುಕಿ 480 ಕಿ.ಮೀ. ಪಯಣಿಸಿದ ಶಿಷ್ಯರು!

06:19 PM May 23, 2024 | Team Udayavani |

ಕಾರ್ಕಳ: ಒಂದೇ ತರಗತಿಯಲ್ಲಿ ಕಲಿತ ಕೆಲವು ಸಹಪಾಠಿಗಳು ಸೇರಿ ತಮಗೆ ಪಾಠ ಮಾಡಿದ ಗುರುವೊಬ್ಬರನ್ನು ಹುಡುಕಿ 480 ಕಿ.ಮೀ. ಪ್ರಯಾಣಿಸಿ ಅವರಿಗೆ ಗುರು ನಮನ ಸಲ್ಲಿಸಿದ ಅವಿಸ್ಮರಣೀಯ ವಿದ್ಯಮಾನ ಇದು. ಹಾಗಂತ ಶಿಷ್ಯರು, ಸಹಪಾಠಿಗಳು ಅಂದರೆ ಸಣ್ಣ ಮಕ್ಕಳೇನಲ್ಲ. ಅವರೆಲ್ಲರೂ ಈಗ ಸುಮಾರು 65 ವರ್ಷ ಆಸುಪಾಸಿನವರು. ತಮಗೆ 48 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳನ್ನು ಹುಡುಕಿ ಕೊಂಡು ಕಾರ್ಕಳದಿಂದ ಕೇರಳದ ತ್ರಿಶ್ಶೂರಿಗೆ ಹೋಗಿ ಗೌರವಿಸಿದ್ದಾರೆ. ಇಂಥ ಗುರು ನಮನದ
ಸಾರ್ಥಕತೆಯನ್ನು ಅನುಭವಿಸಿದ ಮಹಾ ಗುರುವಿನ ಹೆಸರು ಮುರಳೀಧರ ಮೆನನ್‌.ವಯಸ್ಸು 85. ಇವರು ಕಾರ್ಕಳ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರು.

Advertisement

ಏನಿದು ಗುರು-ಶಿಷ್ಯರ ಪ್ರೀತಿ?
ಕಾಲೇಜಿನಲ್ಲಿ ಜತೆಗೆ ಕಲಿತ ವಿದ್ಯಾರ್ಥಿಗಳು ಮತ್ತೆ ಒಂದಾಗಿ ಸ್ನೇಹ ಮಿಲನ ನಡೆಸುವುದು ಈಗ ಸಾಮಾನ್ಯವಾಗಿದೆ. ಕಾರ್ಕಳದ ಭುವ ನೇಂದ್ರ ಕಾಲೇಜಿನ 1976-79ನೇ ಶೈಕ್ಷಣಿಕ ಸಾಲಿನ ಬಿ.ಕಾಂನ ಹಿರಿಯ ವಿದ್ಯಾರ್ಥಿಗಳು ಚರ್ಚೆ ಮಾಡುವುದು ಮಾತ್ರವಲ್ಲ, ತಮಗೆ ಪಾಠ ಕಲಿಸಿದ, ಬದುಕನ್ನು ತಿದ್ದಿದ ಶಿಕ್ಷಕರನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿ, ಅವರಿಗೆ ಗುರು ನಮನ ಸಲ್ಲಿಸುವ ಒಂದು ಪರಿ ಪಾಠ ಆರಂಭಿಸಿದ್ದಾರೆ. ತಮ್ಮ ಪ್ರೀತಿ ಪಾತ್ರ ಉಪ ನ್ಯಾಸಕರನ್ನು ಗೌರವಿಸಿದ ಅವರಿಗೆ ತಮ್ಮ ತುಂಬ ಇಷ್ಟದ ಶಿಕ್ಷಕರೊಬ್ಬರು ತಪ್ಪಿ ಹೋಗಿದ್ದರು. ಅವರೇ ಮುರಳೀಧರ್‌ ಮೆನನ್‌.

ಅವರು ಈಗ ಎಲ್ಲಿದ್ದಾರೆ ಎಂದು ಹುಡುಕಿದಾಗ ಅವರು ಕೇರಳದ ತ್ರಿಶ್ಶೂರು ಸಮೀಪದ ಕೋಡಂಗಲ್ಲಿನಲ್ಲಿ ಇರುವುದು ಗೊತ್ತಾಯಿತು. 85 ವರ್ಷದ ಅವರನ್ನು ಇಲ್ಲಿಗೆ ಕರೆಸುವ ಬದಲು ಅಲ್ಲೇ ಅವರನ್ನು ಮಾತನಾಡಿಸಿಕೊಂಡು ಬರೋಣ ಎಂಬ ನಿರ್ಧಾರಕ್ಕೆ ಬಂತು ಟೀಮ್‌ 1976-79 ಬ್ಯಾಚ್‌.

ಆ ಬ್ಯಾಚ್‌ ನಲ್ಲಿ ಸುಮಾರು 68 ಮಂದಿ ಶಿಷ್ಯರಿದ್ದರು. ಅವರ ಪೈಕಿ ಹಿರಿಯ ವಿದ್ಯಾರ್ಥಿ ಸಹಪಾಠಿಗಳಾದ ತಂಡದ ಕಾರ್ಯನಿರ್ವಾಹಕ ಯೋಗೀಶ್‌ ಕಾಮತ್‌, ಪಾಂಡುರಂಗ ನಾಯಕ್‌, ಆನಂದ ಬೈಲೂರು ಅವರು ತ್ರಿಶ್ಶೂರಿಗೆ ಪಯಣಿಸಿ ಅಲ್ಲಿ ಗುರುವನ್ನು ಕಂಡು ಮಾತನಾ ಡಿಸಿ ಶಿಕ್ಷಕ ದಂಪತಿಯನ್ನು ಸಮ್ಮಾನಿಸಿ ಸಾರ್ಥಕ ಭಾವವನ್ನು ಅನುಭವಿಸಿದರು.

37 ವರ್ಷ ಶಿಕ್ಷಕರಾಗಿದ್ದ ಮೆನನ್‌
1940ರಲ್ಲಿ ಕೇರಳದಲ್ಲಿ ಜನಿಸಿದ ಮುರಳೀಧರ್‌ ಮೆನನ್‌ ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 1963ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ 1988ರ ವರೆಗೆ ವಾಣಿಜ್ಯ ಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮೂಲ್ಕಿಯ ಮಣಿಪಾಲ ಅಕಾಡೆಮಿ ಎಜುಕೇಶನ್‌ನಲ್ಲಿ 7 ವರ್ಷ, ಅನಂತರ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ 1 ವರ್ಷ ಪ್ರೊಫೆಸರ್‌ ಆಗಿ, 4 ವರ್ಷ ಪ್ರಾಂಶುಪಾಲರಾಗಿ 2000ರಲ್ಲಿ ನಿವೃತ್ತಿ ಹೊಂದಿದ್ದರು.

Advertisement

ಕೈಲ್ಲೊಂದು ಡಸ್ಟರ್‌, ಚಾಕ್‌ ಪೀಸ್‌ ಬಿಟ್ಟರೆ ಬೇರೇನಿಲ್ಲ
ಮೆನನ್‌ ಅವರು ಶ್ರೇಷ್ಠ ಮಟ್ಟದ ವಾಣಿಜ್ಯ ಅರ್ಥಶಾಸ್ತ್ರ ಪ್ರಾಧ್ಯಾಪಕರು. ತರಗತಿಗೆ ಹೋಗುವಾಗ ಕೈಯಲ್ಲೊಂದು
ಡಸ್ಟರ್‌ ಮತ್ತು ಚಾಕ್‌ ಪೀಸ್‌ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಸುಲಲಿತವಾದ ಪಾಠ. ಮಕ್ಕಳಿಗೆ ಅವರ ಪಾಠವೆಂದರೆ ಓದುವ ಅಗತ್ಯವೇ ಇರುತ್ತಿರಲಿಲ್ಲವಂತೆ. ಮೆನನ್‌ ಅವರು ಅಷ್ಟೊಂದು ಜನಪ್ರಿಯ ಪ್ರಾಧ್ಯಾಪಕರು. ಅಜಾತಶತ್ರು, ಹಸನ್ಮುಖಿ.ಅಪಾರ ಸಂಖ್ಯೆ ಶಿಷ್ಯರು, ಅಭಿಮಾನಿಗಳನ್ನು ಅವರು ಹೊಂದಿದ್ದಾರೆ ಎನ್ನುತ್ತಾರೆ ಅವರೊಂದಿಗೆ ಏಳೆಂಟು ವರ್ಷ ಕೆಲಸ ಮಾಡಿದ ಅನುಭವವುಳ್ಳ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಅರುಣ್‌ಕುಮಾರ್‌.

ಶಿಷ್ಯರ ಸ್ವಾಗತಕ್ಕೆ ರಸ್ತೆ ಬದಿ ಬಂದು ಕಾದು ನಿಂತರು
ಮುರಳೀಧರ ಮೆನನ್‌ ಅವರು 85ನೇ ವಯಸಿನಲ್ಲೂ ಗಟ್ಟಿಮುಟ್ಟಾಗಿದ್ದಾರೆ. ಮನಸ್ಸು, ಜ್ಞಾನ, ಬುದ್ಧಿ ಶಕ್ತಿಗೆ ಮುಪ್ಪಾಗಿಲ್ಲ. ಶಿಷ್ಯರು ಬರುತ್ತಿದ್ದಾರೆಂದು ತಿಳಿದು ಅವರೇ ಕಾಲ್ನಡಿಗೆಯಲ್ಲಿ ಬಹುದೂರದ ತನಕ ಬಂದು ರಸ್ತೆ ಬದಿ ಕಾದು ಸ್ವಾಗತಿಸಲು ನಿಂತಿದ್ದರಂತೆ. ಜತೆಗೆ ಮಕ್ಕಳನ್ನು ಮಾತನಾಡಿಸಿದಂತೆ ಮಾತನಾಡಿ ಕಳುಹಿಸಿದ್ದಾರೆ. ಪತ್ನಿ ಹಾಗೂ ಯುಎಇನಲ್ಲಿ ಉದ್ಯೋಗದಲ್ಲಿರುವ ಪುತ್ರ,ಅಮೆರಿಕದ ಯುನಿವರ್ಸಿಟಿಯಲ್ಲಿ ಉದ್ಯೋಗದಲ್ಲಿರುವ ಪುತ್ರಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next