Advertisement

Mangaluru ಸಿಟಿಬಸ್‌ಗಳಲ್ಲಿ ಶೀಘ್ರ ಯುಪಿಐ ಮುಖಾಂತರವೂ ಟಿಕೆಟ್‌

11:10 PM Jun 15, 2024 | Team Udayavani |

ಮಂಗಳೂರು: ನಗರದ ಸಿಟಿ ಬಸ್‌ಗಳಲ್ಲಿ ಶೀಘ್ರದಲ್ಲಿಯೇ ಯುಪಿಐ (ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ) ಮುಖಾಂತರ ಟಿಕೆಟ್‌ ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಡಿಜಿಟಲೀಕರಣಕ್ಕೆ ಪೂರಕವಾಗಿ ಸಂಘ ಮೂರು ವರ್ಷಗಳ ಹಿಂದೆ ನಗದು ರಹಿತ ಚಲೋ ಕಾರ್ಡ್‌ ಬಳಕೆಗೆ ತಂದಿತ್ತು. ಇದನ್ನು “ಡಿಕೆಬಿಒಎ ಸ್ಟೂಡೆಂಟ್‌ ಕಾರ್ಡ್‌’ ಆಗಿ ಪರಿವರ್ತಿಸಲಾಗುತ್ತಿದ್ದು, ಇದರಲ್ಲಿಯೂ ವಿದ್ಯಾರ್ಥಿಗಳಿಗೆ ಶೇ. 60 ರಿಯಾಯಿತಿ ದರದ ಪಾಸ್‌ಗಳು ದೊರೆಯಲಿವೆ. ಸಾರ್ವಜನಿಕ ಪ್ರಯಾಣಿಕರಿಗೆ ಶೇ. 10ರ ರಿಯಾಯಿತಿ ದೊರೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶೇ. 60 ರಿಯಾಯಿತಿಯೊಂದಿಗೆ 40 ಮತ್ತು 50 ಟ್ರಿಪ್‌ಗ್ಳ ಪಾಸ್‌ ಪಡೆದು ಪ್ರಯಾಣಿಸಬಹುದು.

ಇದು ವಿದ್ಯಾರ್ಥಿಯ ವಾಸಸ್ಥಳದಿಂದ ಶಾಲೆ-ಕಾಲೇಜಿನವರಿಗೆ ಊರ್ಜಿತವಾಗಿರುತ್ತದೆ. ವಿದ್ಯಾರ್ಥಿಗಳು ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಬಹುದು. ಶೇ. 90ರಷ್ಟು ಮಂದಿ ಈ ಡಿಕೆಬಿಒಎ ಕಾರ್ಡ್‌ನ ಪ್ರಯೋಜನ ಪಡೆಯಬೇಕೆಂಬುದು ಸಂಘದ ಉದ್ದೇಶವಾಗಿದೆ.

ಪಾಸ್‌ಗಳನ್ನು ಹಂಪನಕಟ್ಟೆಯ ಮಿಲಾಗ್ರಿಸ್‌ ಕಟ್ಟಡ, ಸಿಟಿಲೈಟ್‌ ಕಟ್ಟಡ, ಮಾಂಡೋವಿ ಮೋಟಾರ್ಸ್‌ ಎದುರಿನ ಸಾಗರ್‌ ಟೂರಿಸ್ಟ್‌, ಸುರತ್ಕಲ್‌ ಬಸ್‌ ನಿಲ್ದಾಣದ ಸಮೀಪದ ಸಾಯಿ ಮೊಬೈಲ್‌, ತೊಕ್ಕೊಟ್ಟು ಬಸ್‌ ನಿಲ್ದಾಣ ಸಮೀಪದ ಅನು ಮೊಬೈಲ್‌ನಿಂದ ಪಡೆದುಕೊಳ್ಳಬಹುದು.

ಡಿಜಿಟಲೀಕರಣದ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಯುಪಿಐ ಬಸ್‌ ಟಿಕೆಟ್‌ ವ್ಯವಸ್ಥೆ ಮಾತ್ರವಲ್ಲದೆ ಬಸ್‌ ಟೈಮಿಂಗ್ಸ್‌ ವ್ಯವಸ್ಥೆ ಸುಧಾರಣೆಗೆ ಜಿಪಿಎಸ್‌ ಮೂಲಕ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುವುದು. ಈ ಬಗ್ಗೆ ಮಂಗಳೂರು ಸ್ಮಾರ್ಟ್‌ ಸಿಟಿ ಲಿ.ನವರು ಕೂಡ ಯೋಜನೆ ರೂಪಿಸಿದ್ದು ಅವರು ಸಂಪರ್ಕಿಸಿದ ಕೂಡಲೇ ಪೂರಕವಾಗಿ ಸ್ಪಂದಿಸಲಾಗುವುದು ಎಂದರು.

Advertisement

ಸುರಕ್ಷೆಗೆ ಆದ್ಯತೆ
ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ನೀಡುವಂತೆ ಚಾಲಕರಿಗೆ ಸೂಚಿಸಲಾಗಿದೆ. ಈ ಬಗ್ಗೆ ಮಳೆಗಾಲದಲ್ಲಿ ವಿಶೇಷ ಜಾಗರೂಕತೆ ವಹಿಸಬೇಕು. ಫ‌ುಟ್‌ಬೋರ್ಡ್‌ನಲ್ಲಿ ನಿಲ್ಲಬಾರದು, ಟಿಕೆಟ್‌ ಮೆಶಿನ್‌ ಮುಖಾಂತರವೇ ಟಿಕೆಟ್‌ ನೀಡಬೇಕು, ಡಿಕೆಬಿಒಎ ಸ್ಟೂಡೆಂಟ್‌ ಕಾರ್ಡನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ಸಮವಸ್ತ್ರ ಧರಿಸಬೇಕು. ಕರ್ಕಶ ಹಾರನ್‌, ಟೇಪ್‌ ರೆಕಾರ್ಡರ್‌ ಬಳಸಬಾರದು, ಬಸ್‌ ಬೇ ಒಳಭಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವಿದ್ಯಾರ್ಥಿಗಳ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ತೋರಿಸಬಾರದು ಮೊದಲಾದ ಸೂಚನೆಗಳನ್ನು ಈಗಾಗಲೇ ಬಸ್‌ ಚಾಲಕರು, ನಿರ್ವಾಹಕರಿಗೆ ನೀಡಲಾಗಿದೆ ಎಂದು ಅಝೀಝ್ ಪರ್ತಿಪಾಡಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಉಪಾಧ್ಯಕ್ಷ ಕೆ. ರಾಮಚಂದ್ರ ನಾಯಕ್‌, ಮಾಜಿ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next