ನಾಗರಹಾಳ: ಸಮೀಪದ ಬಯ್ನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕರೊಬ್ಬರು ವರ್ಗಾವಣೆಗೊಂಡಿ ದ್ದರಿಂದ ಶಾಲಾ ಮಕ್ಕಳು, ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ಗ್ರಾಮದಲ್ಲಿ ನಡೆದಿದೆ.
ಕಳೆದ 14 ವರ್ಷಗಳಿಂದ ತಿಪ್ಪಣ್ಣ ಎಂಬುವರು ಕನ್ನಡ ವಿಷಯದ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಕುಷ್ಟಗಿ ತಾಲೂಕಿನ ತಾವರಗೇರಾದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಮಕ್ಕಳ ಕಲಿಕೆಯಲ್ಲಿ ಉತ್ತಮ ಹೆಸರು ಮಾಡಿರುವ ಇವರು, ಶಾಲಾ ಮಕ್ಕಳೊಂದಿಗೆ ಬೆರೆತು ಪಾಠ ಮಾಡುತ್ತಿದ್ದರು. ಹೀಗಾಗಿ ಸಹಜವಾಗಿಯೇ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಸದ್ಯ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಿಕ್ಷಕ ತಿಪ್ಪಣ್ಣ ಅವರು ಬಯ್ನಾಪುರ ಪ್ರೌಢಶಾಲೆಯಿಂದ ಬಿಡುಗಡೆಗೊಂಡಿದ್ದಾರೆ.
ಶಿಕ್ಷಕರು ಇಲ್ಲಿಂದ ಬಿಟ್ಟು ಹೋಗುತ್ತಿದ್ದಾರೆ ಎನ್ನುವ ವಿಷಯ ತಿಳಿದ ನೂರಾರು ವಿದ್ಯಾರ್ಥಿಗಳು, “ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಬೇಡಿ ಸರ್’ ಎಂದು ಅಳುತ್ತಾ ತಬ್ಬಿಕೊಂಡರು. ಆಗ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ.
ಭಾವುಕರಾಗಿದ್ದ ಮಕ್ಕಳೊಂದಿಗೆ ಮಾತನಾಡಿದ ಶಿಕ್ಷಕ ತಿಪ್ಪಣ್ಣ, ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಎನ್ನುವುದು ಸಾಮಾನ್ಯ. ಸುಮಾರು 14 ವರ್ಷಗಳಿಂದ ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದ್ದೀರಿ. ವರ್ಗಾವಣೆಗೊಂಡ ಈ ಸ್ಥಾನಕ್ಕೆ ಮತ್ತೆ ನನಗಿಂತಲೂ ಒಳ್ಳೆಯ ಶಿಕ್ಷಕರು ಬರುತ್ತಾರೆ. ನೀವ್ಯಾರೂ ಚಿಂತೆ ಮಾಡಬೇಡಿ ಎಂದು ವಿದ್ಯಾರ್ಥಿಗಳನ್ನು ಸಮಾಧಾನ ಪಡೆಸಿದರು.