ವಿಧಾನಸಭೆ: ನಗರ ಪ್ರದೇಶದಲ್ಲಿ ಬೀಡುಬಿಟ್ಟಿರುವ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ವರ್ಗಮಾಡುವುದು, ಪತಿ-ಪತ್ನಿ ವರ್ಗಾವಣೆಗೆ ಅನುಕೂಲ ಮಾಡಿಕೊಡಲು ಪ್ರಸ್ತುತ ಇರುವ ಶೇ. 8ರ ವರ್ಗಾವಣೆ ಮಿತಿಯನ್ನು ವರ್ಷಕ್ಕೆ ಗರಿಷ್ಠ ಶೇ. 15ಕ್ಕೆ ಏರಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ/ ತಿದ್ದುಪಡಿ) ವಿಧೇಯಕ-2017ನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.
ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಬದಲಾವಣೆ ಮಾಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಕಳೆದ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರಾಥಮಿಕ,ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧೇಯಕ ಮಂಡಿಸಿದರು.
ವಿಧೇಯಕದಲ್ಲಿ ವರ್ಗಾವಣೆ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲೆಯನ್ನು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿಭಾಗವನ್ನು ಘಟಕವೆಂದು ಗುರುತಿಸಲು ತೀರ್ಮಾನಿಸಲಾಗಿದೆ. ಜತೆಗೆ ಅಂತರ್ ಘಟಕ ವರ್ಗಾವಣೆ ಮತ್ತು ಪತಿ-ಪತ್ನಿ ವರ್ಗಾವಣೆ ಪ್ರಕರಣಕ್ಕೆ ಇರುವ ಎಲ್ಲಾ ಮಿತಿಗಳನ್ನು ತೆಗೆದು ಹಾಕುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಗ್ರಾಮೀಣ ಪ್ರದೇಶ ಮತ್ತು ಕೇಂದ್ರ ಸರ್ಕಾರ ಆಯೋಜಿತ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡುವುದು, ನಗರ ಪ್ರದೇಶಗಳಲ್ಲಿ ಸತತವಾಗಿ 10 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆ ಮಾಡುವುದು, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಸೃಷ್ಟಿಯಾಗುವ ಹುದ್ದೆಗಳು ಮತ್ತು ಅತಿಮುಖ್ಯ ಎಂದು ಸೂಚಿಸುವ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡುವುದು ವಿಧೇಯಕದ ಉದ್ದೇಶವಾಗಿದೆ.