ಬೆಂಗಳೂರು: ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸೋಮವಾರದಿಂದ ಮತ್ತೆ
ಆರಂಭವಾಗಲಿದೆ.
ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ವರ್ಗಾವಣೆಯ ವೇಳಾಪಟ್ಟಿ ಹಾಗೂ ನಿಯಮ ಪ್ರಕಟಿಸಲಾಗಿತ್ತಾದರೂ ನೀತಿ ಸಂಹಿತೆಯಿಂದಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು. ಸಮ್ಮಿಶ್ರ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಸೂಚನೆಯಂತೆ ಜೂ.18ರಂದು ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭವಾಗಲಿದೆ.
ಚುನಾವಣಾ ಪೂರ್ವದಲ್ಲಿ ವರ್ಗಾವಣೆಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ಅರ್ಜಿ ಬಂದಿದ್ದು, ಇದರಲ್ಲಿ ಪತಿ ಪತ್ನಿ ಪ್ರಕರಣ, ತೀವ್ರ ಅನಾರೋಗ್ಯ ಪ್ರಕರಣ, ಕಡ್ಡಾಯ ವರ್ಗಾವಣೆ, ಕೋರಿಕೆ ವರ್ಗಾವಣೆ ಅರ್ಜಿಗಳು ಸೇರಿಕೊಂಡಿವೆ. ನಗರ ಪ್ರದೇಶದ ಒಂದೇ ಶಾಲೆಯಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ಕಡ್ಡಾಯ ವರ್ಗಾವಣೆ ಮಾಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.