ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಡೇಪಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಚಂದ್ರಪಾಲ್ ಎನ್ನುವವರು ಮಕ್ಕಳಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಪಾಠ ಮಾಡುತ್ತಾರೆ ಎಂದು ಮಕ್ಕಳು ಮತ್ತು ಪಾಲಕರು ಆರೋಪಿಸಿದ್ದಾರೆ.
ಸುಮಾರು ದಿನಗಳಿಂದ ಶಿಕ್ಷಕ ವಿದ್ಯಾರ್ಥಿಗಳಿಗೆ ಈ ರೀತಿ ಪಾಠ ಮಾಡುತ್ತಿದ್ದು, ಯಾರಿಗೂ ಹೇಳದಂತೆ ಮಕ್ಕಳನ್ನು ಬೆದರಿಸುತ್ತಿದ್ದ ಎನ್ನಲಾಗಿದೆ.
ಏಳನೇ ತರಗತಿ ಮಕ್ಕಳಿಗೆ ಗರ್ಭವತಿ ಹೇಗಾಗುತ್ತಾರೆ, ದೊಡ್ಡವರಾಗುವುದು ಹೇಗೆ ಎನ್ನುವುದನ್ನು ಮೊಬೈಲ್ ನಲ್ಲಿ ವಿಡಿಯೋಗಳನ್ನು ತೋರಿಸಿ ಪಾಠ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಮಕ್ಕಳು ಪಾಲಕರ ಗಮನಕ್ಕೆ ತಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಾಲಕರು ಶಾಲೆಯ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ವಿಷಯ ತಿಳಿದ ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಏಳನೇ ತರಗತಿ ಮಕ್ಕಳಿಗೆ ಪುಸ್ತಕ ಸರಬರಾಜು ಆಗದಿರುವುದರಿಂದ ಮೊಬೈಲ್ ನಲ್ಲಿ ಆದಿವಾಸಿಗಳ ಜೀವನ, ಸಂತಾನೋತ್ಪತ್ತಿ ಬಗ್ಗೆ ಪಾಠ ಮಾಡುತ್ತಿದ್ದೆ ಎಂದು ಶಿಕ್ಷಕ ಚಂದ್ರಪಾಲ್ ಒಪ್ಪಿಕೊಂಡಿದ್ದಾರೆ.
ಸದ್ಯ ಗುರುಮಠಕಲ್ ವಲಯ ಶಿಕ್ಷಣ ಸಂಯೋಜಕರು ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ. ಶಿಕ್ಷಕ ಮೊಬೈಲ್ ನಲ್ಲಿ ಪಾಠ ಮಾಡುವುದು ತಪ್ಪು, ಈ ಬಗ್ಗೆ ಮೇಲಾಧಿಕಾರಿಗಳಿಗೆ ಶಿಸ್ತುಕ್ರಮಕ್ಕೆ ವರದಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಪಾಲಕರು ಮತ್ತು ಮಕ್ಕಳು ಈ ಶಿಕ್ಷಕ ನಮಗೆ ಬೇಡ ಎಂದು ಪಟ್ಟುಹಿಡಿದಿದ್ದಾರೆ.