ಚನ್ನಪಟ್ಟಣ: ಶಿಕ್ಷಕರ ಕೊರತೆಯಿಂದಾಗಿ ಪಾಠ ಸಮರ್ಪಕ ವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಕೋಡಂಬಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 273 ವಿದ್ಯಾರ್ಥಿಗಳಿದ್ದರೂ ಕೇವಲ ಏಳು ಶಿಕ್ಷಕರು ಮಾತ್ರ ಇದ್ದು, ಎಲ್ಲ ವಿಷಯಗಳಿಗೂ ಸೂಕ್ತ ಶಿಕ್ಷಕರಿಲ್ಲದೆ, ಪಾಠ, ತರಗತಿ ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಗೆ ಸಮರ್ಪಕವಾಗಿ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿ, ತರಗತಿಯಿಂದ ಹೊರಗೆ ಬಂದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆಯವರೆಗೂ ವಿದ್ಯಾರ್ಥಿಗಳು ಬಿಸಿಲಿನ ತಾಪ ಲೆಕ್ಕಿಸದೇ ಪ್ರತಿಭಟನೆ ಮುಂದುವರಿಸಿದ್ದರು. ಸಂಬಂಧಿಸಿದವರು ಬಂದು ಸೂಕ್ತ ವ್ಯವಸ್ಥೆ ಮಾಡುವವರೆಗೂ ನಾವು ಪ್ರತಿನಿತ್ಯ ಶಾಲೆಯಿಂದ ಹೊರಗೆ ಉಳಿಯುವುದಾಗಿ ಪಟ್ಟು ಹಿಡಿದರು.
ಎಸ್‌ಡಿಎಂಸಿ ಅಧ್ಯಕ್ಷರು ಮಾತನಾಡಿ, ಶಾಲೆಯಲ್ಲಿರುವ 7 ಜನ ಶಿಕ್ಷಕರ ಪೈಕಿ ಒಬ್ಬರನ್ನು ನಿಯೋಜನೆ ಮೇರೆಗೆ ಕಳುಹಿಸಲಾಗಿದೆ. ಇನ್ನೂ ಮೂರು ಜನ ಶಿಕ್ಷಕರ ಕೊರತೆ ಇದ್ದು, ಪಾಠ ಪ್ರವಚನ ಕುಂಠಿತವಾಗಿದೆ. ನಾವು ಈಗಾಗಲೇ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಶಿಕ್ಷಕರ ಸಮಸ್ಯೆ ಬಗ್ಗೆ ಹಲವು ಬಾರಿ ನಿವೇದಿಸಿಕೊಂಡಿದ್ದೇವೆ. ಆದರೂ ಸಹಿತ ಅವರು ಕ್ರಮ ತೆಗೆದುಕೊಂಡಿಲ್ಲ, ಇನ್ನು ಮೂರು ಜನ ಶಾಶ್ವತ ಶಿಕ್ಷಕರು ಬೇಕಾಗಿದೆ. ಅವರನ್ನು ತಕ್ಷಣ ಒದಗಿಸಿ ಈ ಪಬ್ಲಿಕ್ ಶಾಲೆಯನ್ನು ಉಳಿಸಬೇಕು. ಇಲ್ಲದಿದ್ದರೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಟಿಸಿ ಪಡೆದು ಬೇರೆ ಶಾಲೆಗೆ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳ ಜೊತೆಗೆ ಕೋಡಂಬ ಹಳ್ಳಿಯ ಪ್ರಮುಖರು, ಪೋಷಕರು ಪೂರಕವಾಗಿ ನಿಂತು ಸಹಕರಿಸಿದರು.