ಬಂಗಾರಪೇಟೆ: ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ದಿನ ಮಕ್ಕಳನ್ನು ಸಂತಸದಿಂದ ಶಾಲೆಗೆ ಕಳುಹಿಸಿದ್ದ ಗ್ರಾಮಸ್ಥರು ಈಗ, ಬೇರೆಡೆ ನಿಯೋಜನೆಗೊಂಡಿದ್ದ ಶಿಕ್ಷಕಿಗಾಗಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೂಡಲೇ ನಿಯೋಜಿಸಿ: ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ದೋಣಿಮಡಗು ಗ್ರಾಪಂನ ಕುಂದರಸನಹಳ್ಳಿ ಗ್ರಾಮದಲ್ಲಿ 1 ರಿಂದ 5 ತರಗತಿವರೆಗೂ ಸರ್ಕಾರಿ ಶಾಲೆಯಿದೆ. ಒಟ್ಟು 32 ಮಂದಿ ಮಕ್ಕಳು ದಾಖಲಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಾಲೆ ಆರಂಭಕ್ಕೂ ಹಿಂದಿನ ದಿನ ಗ್ರಾಪಂ ಸದಸ್ಯರು, ಗ್ರಾಮಸ್ಥರು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿ ಮಕ್ಕಳ ದಾಖಲಾತಿಗೆ ಅನುವು ಮಾಡಿಕೊಟ್ಟಿದ್ದರು. ಆದರೆ, ಮರು ದಿನ ಕಾಯಂ ನುರಿತ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿ ಅತಿಥಿ ಶಿಕ್ಷಕರನ್ನು ಶಾಲೆಗೆ ಅಧಿಕಾರಿಗಳು ನಿಯೋಜಿಸಿದ್ದರು. ಹೀಗಾಗಿ ಆಕ್ರೋಶಗೊಂಡ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಬೀಗ ಜಡಿದರು. ಅಲ್ಲದೇ, ಶಾಲೆಯ ಕಾಯಂ ಶಿಕ್ಷಕಿ ಶಾಂತಮ್ಮ ಎಂಬವರನ್ನೇ ಮರಳಿ ನಿಯೋಜನೆ ಮಾಡಬೇಕೆಂದು ಒತ್ತಾಯಿಸಿದರು.
ಶಾಲೆಗೆ ಬೀಗ: ನಲಿ-ಕಲಿಗೆ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆಯ ಶಿಕ್ಷಕಿಯನ್ನು ದೋಣಿಮಡಗು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕುಂದರಸನಹಳ್ಳಿ ಶಾಲೆಗೆ ಮತ್ತೂಬ್ಬ ಕಾಯಂ ಶಿಕ್ಷಕಿ ಜತೆಗೆ ಒಬ್ಬ ಅತಿಥಿ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ. ಆದರೆ, ಈ ಹಿಂದೆ ಇದ್ದ ಶಿಕ್ಷಕಿಯನ್ನು ಮರಳಿ ಕುಂದರಸನಹಳ್ಳಿ ಶಾಲೆಗೆ ನಿಯೋಜನೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಶಾಲೆಗೆ ಬೀಗ ಹಾಕಿದರು.
ಪ್ರತಿಭಟನೆ: ತಾಲೂಕಿನ ಗಡಿಭಾಗದ ದೋಣಿ ಮಡಗು ಗ್ರಾಮದಲ್ಲಿ ನಲಿ-ಕಲಿಗೆ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆ ಶಿಕ್ಷಕಿಯನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಕುಂದರಸನಹಳ್ಳಿ ಶಾಲೆಗೆ ಒಬ್ಬ ಕಾಯಂ ಮತ್ತು ಒಬ್ಬ ಅತಿಥಿ ಶಿಕ್ಷಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟಿಸಿದರು.
2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜನೆ ಮಾಡುವುದು ಸಹಜ. ಈ ಹಿಂದೆ ಇದ್ದ ಶಾಂತಮ್ಮ ಎಂಬ ಶಿಕ್ಷಕಿ ನಲಿ-ಕಲಿ ತರಬೇತಿ ಪಡೆದಿದ್ದರಿಂದ ಈ ಶಿಕ್ಷಕಿಯ ಅನುಮತಿ ಮೇರೆಗೆ ದೋಣಿಮಡಗು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಗ್ರಾಮಸ್ಥರು ಈ ಶಿಕ್ಷಕರೇ ಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಶಿಕ್ಷಕಿ ಶಾಂತಮ್ಮ ಅವರನ್ನು ಮತ್ತೆ ಕುಂದರಸನಹಳ್ಳಿ ಶಾಲೆಗೆ ನಿಯೋಜನೆ ಮಾಡಲಾಗಿದೆ. ಸಮಸ್ಯೆ ಬಗೆಹರಿಸಲಾಗಿದೆ.
– ಡಿ.ಎನ್.ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಗಾರಪೇಟೆ